ರಿಕ್ಷಾ ತಡೆದು ನಿಲ್ಲಿಸಿ ಯುವಕನನ್ನು ಇರಿದು ಕೊಲೆಗೈದ ಪ್ರಕರಣ: ಆರೋಪಿ ದೋಷಿ; ಶಿಕ್ಷೆ ಘೋಷಣೆ ಇಂದು
ಕಾಸರಗೋಡು: ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣದ ಆರೋಪಿಯ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ರಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತುಗೊಂಡಿದ್ದು, ಆದ್ದರಿಂದ ಆತ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷಾ ಪ್ರಮಾಣ ಘೋಷಣೆಯನ್ನು ನ್ಯಾಯಾಲಯ ಇಂದಿಗೆ ಮೀಸಲಿರಿಸಿದೆ.
ಪನತ್ತಡಿ ಶಿವಪುರಂ ಚಾಮುಂಡಿಕುನ್ನು ಕೋಚೇರಿಯಿಲ್ ಕೆ.ಎಂ. ಜೋಸೆಫ್ (೫೮) ಈ ಪ್ರಕರಣದ ಆರೋಪಿಯಾಗಿದ್ದು, ಆತ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ.
೨೦೧೪ ಜೂನ್ ೨೫ರಂದು ಪನತ್ತಡಿ ಚಾಮುಂಡಿಕುನ್ನಿನಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪನತ್ತಡಿ ಪುಲಿಕಡವಿನ ಕೆ.ಎಸ್. ಮೋಹನ್‌ದಾಸ್ ಎಂಬವರ ಮಗ ಅರುಣ್ ಮೋಹನ್ ಅಲಿಯಾಸ್ ಅರುಣ್ ಲಾಲ್ (೩೦) ಮತ್ತು ಕೆ.ಜೆ. ಬಿಜು (೨೮) ಎಂಬವರನ್ನು ಆರೋಪಿ ಜೋಸೆಫ್ ತಡೆದು ನಿಲ್ಲಿಸಿ ಚಾಕುವಿನಿಂದ ಅವರಿಬ್ಬರಿಗೆ ಇರಿದು ಗಂಭೀರ ಗಾಯಗೊಳಿಸಿದ್ದನು. ಗಾಯಗೊಂಡ ಅವರಿಬ್ಬರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆ ಅರುಣ್ ಮೋಹನ್ ಸಾವನ್ನಪ್ಪಿದ್ದನು. ಗಂಭೀರ ಗಾಯಗೊಂಡ ಬಿಜುನನ್ನು ನಂತರ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಈ ಬಗ್ಗೆ ವೆಳ್ಳರಿಕುಂಡ್ ಪೊಲೀಸರು ಪ್ರಕರಣ ದಾಖಲಿಸಿ ಬಳಿಕ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಅಂದು ವೆಳ್ಳರಿಕುಂಡ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಎಂ.ಕೆ. ಸುರೇಶ್ ಕುಮಾರ್ ಅವರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದರು.
ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಪಬ್ಲಿಕ್ ಪ್ರೋಸಿಕ್ಯೂಟರ್ ಇ- ಲೋಹಿತಾಕ್ಷನ್ ಅವರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.