ರೋಯಲ್ ಟ್ರಾವಂಕೂರ್ ವಂಚನೆ: ಪೊಲೀಸರನ್ನೂ ವಂಚಿಸಿರುವುದಾಗಿ ಆರೋಪ
ಕುಂಬಳೆ: ರೋಯಲ್ ಟ್ರಾವಂಕೂರ್ ಅಗ್ರಿಕಲ್ಚರಿಸ್ಟ್ ಪ್ರೊಡ್ಯೂಸರ್ ಕಂಪೆನಿ ಅಧಿಕಾರಿಗಳು ಪೊಲೀಸರನ್ನು ವಂಚಿಸಿರುವುದಾಗಿ ಆರೋಪವುಂಟಾಗಿದೆ. ಸಂಸ್ಥೆ ಸಂಗ್ರಹಿಸಿದ ಠೇವಣಿ ವಂಚನೆ ವಿರುದ್ಧ ಸಂಸ್ಥೆಯ ನೌಕರರು ಹಾಗೂ ಠೇವಣಿದಾರರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಸ್ಥೆಯ ಮಾಲಕರನ್ನು ಪೊಲೀಸರು ಸಂಪರ್ಕಿಸಿದ್ದು, ನಿನ್ನೆ ಈ ಬಗ್ಗೆ ಚರ್ಚೆ ನಡೆಸಲು ತಲುಪುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದರು. ಈ ವಿಷಯದಲ್ಲಿ ವಿವಿಧ ಭರವಸೆಗಳನ್ನು ನಂಬಿ ವಂಚಿತರಾದ ಠೇವಣಿದಾರರು ಸಹಿತ ಐವತ್ತಕ್ಕಿಂತ ಹೆಚ್ಚು ಮಂದಿ ಪೊಲೀಸ್ ಠಾಣೆಯಲ್ಲಿ ಕಾದು ನಿಂತಿದ್ದರು. ಆದರೆ ಸಂಸ್ಥೆಯ ಮಾಲಕರು ತಲುಪಿಲ್ಲ. ಅವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸಿದರಾದರೂ ಫೋನ್ ಕರೆ ಸ್ವೀಕರಿಸಿಲ್ಲವೆಂಬ ಆರೋಪವುಂಟಾ ಗಿದೆ. ದೀರ್ಘ ಹೊತ್ತು ಕಾದು ನಿಂತ ಠೇವಣಿ ದಾರರು ಕೊನೆಗೆ ನಿರಾಸೆಗೊಂಡು ಮರಳಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೋರ್ಡ್ ಸ್ಥಾಪಿಸಿ ಕಚೇರಿ ತೆರೆದು ಕೋಟ್ಯಂತರ ರೂಪಾಯಿ ವಂಚಿಸಿದ ತಂಡದ ಕುರಿತು ರಾಜಕಾರಣಿಗಳು ತಾಳುತ್ತಿರುವ ಮೌನ ಚರ್ಚಾ ವಿಷಯವಾಗಿದೆ.