ಲೋಕಸಭಾ ಚುನಾವಣೆ: ಕ್ರಿಮಿನಲ್ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಸ್ಪೆಷಲ್ ಡ್ರೈವ್ ಕಾರ್ಯಾಚರಣೆ; ಹಲವರ ಸೆರೆ
ಕಾಸರಗೋಡು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣಗಳ ಪತ್ತೆಗಾಗಿ ಪೊಲೀಸರು ಸ್ಪೆಷಲ್ ಡ್ರೈವ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲೂ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ಇದರಂತೆ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು ತಲೆಮರೆಸಿ ಕೊಂಡು ಜೀವಿಸು ತ್ತಿರುವವರನ್ನು ವಾರಂಟ್ ಪ್ರಕಾರ ಪತ್ತೆಹಚ್ಚಿ ಅವರನ್ನು ಪೊಲೀಸರು ಸೆರೆಹಿಡಿಯಲಾರಂಭಿಸಿದ್ದಾರೆ. ಇದರ ಹೊರತಾಗಿ ಚುನಾವಣಾ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ೩೫ ಮಂದಿಯನ್ನೂ ಪೊಲೀಸರು ಸೆರೆಹಿಡಿದಿದ್ದು, ಅವರನ್ನು ಬಳಿಕ ಎಸ್ಡಿಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಅವರಿಗೆ ಜಾಮೀನು ಮಂಜೂರು ಮಾಡಲಾಯಿತು. ಇದು ಮಾತ್ರವಲ್ಲದೆ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾಗಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿಯೂ ಪೊಲೀಸರು ಇನ್ನೊಂದೆಡೆ ವಿಶೇಷ ಶೋಧ ಆರೋಪಿಸಿದ್ದಾರೆ. ಇದರಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಗಳಲ್ಲಾಗಿ ಹಲವು ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಚುನಾವಣೆಯ ವೇಳೆ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಖಾತರಿಪಡಿಸಿ ಅದಕ್ಕೆ ಭಂಗತರುವ ಎಲ್ಲಾ ಯತ್ನಗಳನ್ನು ವಿಫಲಗೊಳಿಸಿ ಶಾಂತ ಹಾಗೂ ನ್ಯಾಯಯುತವಾಗಿ ಚುನಾವಣೆ ನಡೆಸುವಂತೆ ಮಾಡುವುದೇ ಪೊಲೀಸರು ಆರಂಭಿಸಿರುವ ಈ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯ ಪ್ರಧಾನ ಉದ್ದೇಶವಾಗಿದೆ. ಕೋಮುಗಲಭೆ ಪ್ರಕರಣಗಳ ಮೇಲೆ ಪೊಲೀಸರು ಅತೀ ಹೆಚ್ಚು ನಿಗಾ ಇರಿಸಿಕೊಂಡಿದ್ದಾರೆ.