ಲೋಕ ಹಿತದ ಕಾರ್ಯಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು-ಕೊಂಡೆವೂರುಶ್ರೀ
ನಾರಂಪಾಡಿ: ಪ್ರತಿಯೊಬ್ಬರೂ ಲೋಕಹಿತದ ಕಾರ್ಯಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನಡೆದ ನವೀಕರಣ ಪುನಃ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಶಾಭಿಷೇಕದಂಗವಾಗಿ ನಿನ್ನೆ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬರಲ್ಲೂ ಒಳ್ಳೆಯ ಭಾವನೆ ಜಾಗೃತಿಯಾಗಬೇಕು. ಇಂತಹ ಕಾರ್ಯ ಈ ಪರಿಸರದಲ್ಲಿ ನಡೆಯುತ್ತಿದೆ. ಭಗವಂತನ ಹೆಸರಲ್ಲಿ ಸಮಾಜದ ಹಿತ ಕಾರ್ಯವನ್ನು ಮಾಡಬೇಕು. ಒಳ್ಳೆಯ ಸಂಸ್ಕಾರ ಲಭಿಸುವ ಶ್ರದ್ಧಾ ಕೇಂದ್ರವಾಗಿ ಕ್ಷೇತ್ರವು ನಮ್ಮ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಾಗಬೇಕು. ಇಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬವನ್ನು ಕಾಣಬಹುದು. ಒಂದು ಐಕ್ಯತೆಯ ಸಂದೇಶವನ್ನು ಕಾಣಬಹು ದಾಗಿದೆ. ಅತ್ಯಂತ ಶ್ರದ್ಧೆಯಿಂದ ಭಕ್ತಿಯಿಂದ ನಿರಂತರ ಸ್ಮರಣೆಯನ್ನು ಸಮರ್ಪಿಸಿಕೊಂಡು ಈ ಪುಣ್ಯ ಕಾರ್ಯದಲ್ಲಿ ಸಹಯೋಗ ನೀಡುವ ಮೂಲಕ ಬದುಕನ್ನು ಸಾರ್ಥಕತೆಯನ್ನು ಹೊಂದಲಿ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ಅಖಿಲ ಭಾರತೀಯ ಕುಟುಂಬ ಪ್ರಮೋಧನ್ ಕಾರ್ಯಕರ್ತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಮುಂಡೋಳು ಶ್ರೀ ಮಹಾವಿಷ್ಣು ದುರ್ಗಾಪರಮೇಶ್ವರೀ ಶ್ರೀಶಾಸ್ತಾರ ಕ್ಷೇತ್ರದ ಆಡಳಿತ ಮೊಕ್ತೇಸರ ರಘುರಾಮ ಬಲ್ಲಾಳ್, ಸಾಮಾಜಿಕ ಕಾರ್ಯಕರ್ತ ನ್ಯಾಯ ವಾದಿ ಕೆ. ಶ್ರೀಕಾಂತ್, ಉದ್ಯಮಿ ಸುರೇಶ್, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಾತನಾಡಿದರು.
ನಾರಂಪಾಡಿ ಗುತ್ತು ದೈವಸ್ಥಾನದ ಬಾಲಕೃಷ್ಣ ರೈ, ಶ್ರೀ ಕ್ಷೇತ್ರ ಬ್ರಹ್ಮಕಲಶಾ ಭಿಷೇಕ ಸಮಿತಿ ಉಪಾಧ್ಯಕ್ಷರಾದ ವಾಸುದೇವ ಭಟ್ ಉಪ್ಪಂಗಳ, ಶಂಕರ ನಾರಾಯಣ ಮಯ್ಯ ಬದಿಯಡ್ಕ, ಪದ್ಮನಾಭ ಭಟ್ ಕೊರೆಕ್ಕಾನ, ನೆಕ್ರಾಜೆ ಶ್ರೀ ಸಂತಾನಗೋಪಾಲಕೃಷ್ಣ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಗಣೇಶ ವತ್ಸ ನೆಕ್ರಾಜೆ, ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಉಪಸ್ಥಿತರಿದ್ದರು. ಉದಯ ನಾರಂಪಾಡಿ ಪ್ರಾರ್ಥನೆ ಹಾಡಿದರು. ಬ್ರಹ್ಮಕಲಶಾಭಿಷೇಕ ಕೋಶಾಧಿಕಾರಿ ಸೀತಾರಾಮ ಕುಂಜತ್ತಾಯ ಸ್ವಾಗತಿಸಿ, ಬ್ರಹ್ಮಕಲಶಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ನಾರಂಪಾಡಿ ವಂದಿಸಿದರು. ಹರ್ಷ ಮಾಸ್ತರ್ ಬೆಳಿಂಜ ನಿರ್ವಹಿಸಿದರು.
ವೀಣಾವಾದಿನಿಯ ಯೋಗೀಶ ಶರ್ಮ ಬಳ್ಳಪದವು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ರಾತ್ರಿ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾ ಸಂಘದಿಂದ ದಕ್ಷಯಜ್ಞ-ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.