ವಯನಾಡಿನಲ್ಲಿ ಮತ್ತೆ ಕಾಡಾನೆಗಳ ಹಾವಳಿ: ಅರಣ್ಯಪಾಲಕ ಬಲಿ; ಹರತಾಳ
ವಯನಾಡು: ವಯನಾಡಿನಲ್ಲಿ ಕಾಡಾನೆಗಳ ದಾಳಿ ಎಗ್ಗಿಲ್ಲದೆ ಈಗಲೂ ಮುಂದುವರಿಯುತ್ತಿದ್ದು, ಈ ಮಧ್ಯೆ ಕಾಡಾನೆಯೊಂದು ಅರಣ್ಯದ ವಾಚರ್ (ಕಾವಲುಗಾರ)ನನ್ನು ತುಳಿದು ಕೊಂದುಹಾಕಿದ ಘಟನೆ ನಡೆದಿದೆ.
ಅರಣ್ಯ ಇಲಾಖೆಯ ಕುರುವ ದ್ವೀಪ್ ಇಕೋ ಟೂರಿಸಂ ಕೇಂದ್ರದ ಗೈಡ್ ವಾಚರ್ ಪುಲ್‌ಪಳ್ಳಿ ಪಾಕಂ ವೆಳ್ಳಿಚ್ಚಾಲಿಲ್ ಪೋಲ್ (೫೨) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ಕಳೆದ ವಾರ ಕರ್ನಾಟಕ ಅರಣ್ಯ ದಿಂದ ಕಾಡಾನೆಯೊಂದು ಜನವಾಸ ಕೇಂದ್ರಕ್ಕೆ ನುಗ್ಗಿ ವಯನಾಡು ಪಡಮಲ ಚಾಲಿಗದ್ದೆಯ ರೈತ ಅಜೀಶ್ ಎಂಬವರನ್ನು ತುಳಿದುಕೊಂದಿತ್ತು. ಆ ಜಾಗದಿಂದ ಸುಮಾರು ೭ ಕಿಲೋ ಮೀಟರ್ ದೂರದಲ್ಲಿರುವ ಪ್ರದೇಶದಲ್ಲೇ ಇನ್ನೊಂದು ಕಾಡಾನೆ ವಾಚರ್ ಪೋಲ್‌ರನ್ನು ನಿನ್ನೆ ತುಳಿದು ಕೊಂದು ಹಾಕಿದೆ. ಆ ಮೂಲಕ ವಯನಾಡ್‌ನಲ್ಲಿ ಕಾಡಾನೆ ದಾಳಿಗೆ ಬಲಿಯಾದವರ ಸಂಖ್ಯೆ ಕಳೆದ ಒಂದು ವಾರದಲ್ಲಿ ಎರಡಕ್ಕೇರಿದೆ.
ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಅಗತ್ಯದ ಕ್ರಮ ಕೈಗೊಳ್ಳದೆ ಇರುವ ನಿಲುವನ್ನು ಪ್ರತಿಭಟಿಸಿ ವಯನಾಡಿನಲ್ಲಿ ಜನರು ಇಂದು ಹರತಾಳ ಆರಂಭಿಸಿದ್ದಾರೆ.
ಗೈಡ್ ವಾಚರ್ ಪೋಲ್ ನಿನ್ನೆ ಬೆಳಿಗ್ಗೆ ಕುರುವ ದ್ವೀಪ್ ಇಕೋ ಟೂರಿಸಂ ಕೇಂದ್ರದಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ಅಲ್ಲಿಗೆ ಕಾಡಾನೆಯೊಂದು ನುಗ್ಗಿ ಅವರ ಮೇಲೆ ದಾಳಿ ನಡೆಸಿದೆ. ತುಳಿತದಿಂದ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.ಮೃತದೇಹವನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳ ಪಡಿಸಲಾಗಿದೆ