ವಯನಾಡ್ ದುರಂತ: ಉಚಿತ ರೀಚಾರ್ಜ್ ಮೂಲಕ ಗಮನ ಸೆಳೆದ ಕನ್ನೆಪ್ಪಾಡಿ ನಿವಾಸಿ
ಬದಿಯಡ್ಕ: ವಯನಾಡು ಜಿಲ್ಲೆಯ ದುರಂತ ಪ್ರದೇಶಗಳಲ್ಲಿ ರಕ್ಷಣಾ ಚಟುವಟಿಕೆ ನಡೆಸುವ ಸಂಘ ಸಂಸ್ಥೆಗಳ ಕಾರ್ಯಕರ್ತರಿಗೆ ಉಚಿತ ಮೊಬೈಲ್ ರೀಚಾರ್ಜ್ ನೀಡಿ ಕನ್ನೆಪ್ಪಾಡಿ ನಿವಾಸಿ ನಿಝಾಂ ಗಮನ ಸೆಳೆದಿದ್ದಾರೆ. ‘ಯಾವುದೇ ಸಹಾಯವೂ ಸಣ್ಣದಲ್ಲ. ಜೊತೆಗಿದ್ದೇನೆ ಕರೆ ಮಾಡಿ’ ಎಂದು ಇವರು ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿದ್ದರು. ದುರಂತ ಸಂಭವಿಸಿದ ದಿನದಿಂದಲೇ ಅಗತ್ಯದವರು ತನ್ನನ್ನು ಸಂಪರ್ಕಿಸಿದರೆ ಕೂಡಲೇ ಉಚಿತ ರೀಚಾರ್ಜ್ ಮಾಡುವುದಾಗಿ ಇವರು ಘೋಷಿಸಿದ್ದರು. ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್ ಮೊದಲಾದ ಕಂಪೆನಿಗಳು 3 ದಿನದ ಇಂಟರ್‌ನೆಟ್ ಕರೆ ಉಚಿತ ಗೊಳಿಸುವುದಕ್ಕಿಂತ ಮುಂಚಿತವೇ ನಿಝಾಂ ಈ ಸಹಾಯ ಘೋಷಿಸಿದ್ದಾರೆ. ರಕ್ಷಣಾ ಕಾರ್ಯಕರ್ತರಿಗೆ ಅವರ ಸಂಬಂಧಿಕರನ್ನು, ಕುಟುಂಬದವರನ್ನು ಸಂಪರ್ಕಿಸಲು ರೀಚಾರ್ಜ್ ಇಲ್ಲದೆ ಸಮಸ್ಯೆಗೀಡಾಗಬಾರದೆಂಬ ಹಿನ್ನೆಲೆಯಲ್ಲಿ ಉಚಿತ ರೀಚಾರ್ಜ್ ನೀಡಿರುವುದಾಗಿ ನಿಝಾಂ ತಿಳಿಸಿದ್ದಾರೆ.
ಮುಂಬೈಯ ಬಾಂದ್ರದಲ್ಲಿ ವ್ಯಾಪಾರಿಯಾಗಿರುವ ನಿಝಾಂ ಈ ಮೊದಲು ಕೋವಿಡ್ ಸಮಯದಲ್ಲೂ ಹಲವಾರು ಮಂದಿಗೆ ಸಹಾಯ ನೀಡಿದ್ದರೆನ್ನಲಾಗಿದೆ. ಕಾಸರಗೋಡು ಜಿಲ್ಲಾ ನ್ಯಾಯಾಲಯದ ನಿವೃತ್ತ ಉದ್ಯೋಗಿಯಾದ ಇದ್ದಿನ್ ಕುಂಞಿ- ಬೀಫಾತಿಮ ದಂಪತಿ ಪುತ್ರನಾಗಿದ್ದಾರೆ.