ವರ್ಕಾಡಿಯಲ್ಲಿ ಗ್ರಾಮ ಸೇವಕರಿಲ್ಲದೆ ಮೂರು ತಿಂಗಳು: ಬಡವರ ಯೋಜನೆಗಳು ಮೊಟಕು; ಮುಸ್ಲಿಂ ಲೀಗ್ ಪಂ. ಕಚೇರಿ ಮುತ್ತಿಗೆ ಎಚ್ಚರಿಕೆ
ವರ್ಕಾಡಿ: ಪಂಚಾಯತ್‌ನಲ್ಲಿ ವಿಲ್ಲೇಜ್ ಎಕ್ಸ್‌ಟೆನ್ಶನ್ ಅಧಿಕಾರಿ ಇಲ್ಲದೆ ಮೂರು ತಿಂಗಳು ಕಳೆದಿದ್ದು, ಇದರಿಂದ ಇಲ್ಲಿನ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಚಾಯತ್‌ನ ಲೈಫ್ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಜ್ ಯೋಜನೆ, ಉದ್ಯೋಗ ಖಾತರಿ ಯೋಜನೆ, ಬಡತನ ನಿರ್ಮೂಲನಾ ಯೋಜನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ವಿವಿಧ ಯೋಜನೆ, ಪಂಚಾಯತ್ ಮನೆ ದುರಸ್ತಿ ಯೋಜನೆ, ಬಿಪಿಎಲ್ ಪ್ರಮಾಣಪತ್ರ ಸಹಿತ ವಿವಿಧ ಯೋಜನೆಗಳ ನಿರ್ವಹಣೆ ಹೊಣೆ ಇರುವ ಅಧಿಕಾರಿ ಇಲ್ಲದ ಕಾರಣ ಈ ಯೋಜನೆಗಳೆಲ್ಲಾ ಮೊಟಕಾಗಿದೆ.
ಗ್ರಾಮ ಸೇವಕ ಅಧಿಕಾರಿ ಇಲ್ಲದೆ ಮೂರು ತಿಂಗಳಾದರೂ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿಲ್ಲವೆಂದು ವರ್ಕಾಡಿ ಪಂ. ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ, ಪಂ. ಸದಸ್ಯ ಅಬ್ದುಲ್ ಮಜೀದ್ ಬಿ.ಎ ಆರೋಪಿಸಿದ್ದಾರೆ. ಬಡಜನರು ತಮ್ಮ ಅಗತ್ಯಕ್ಕೆ ದಿನವೂ ಬಂದು ಗ್ರಾಮ ಸೇವಕರು ಇದ್ದಾರಾ ಎಂಬ ಬಗ್ಗೆ ಕೇಳಿ ಹಿಂತಿರುಗುತ್ತಿದ್ದಾರೆಂದು ಅವರು ದೂರಿದ್ದಾರೆ. ಶೀಘ್ರವೇ ಗ್ರಾಮ ಸೇವಕರನ್ನು ನೇಮಕಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಜನರನ್ನು ಸೇರಿಸಿ ಪಂಚಾಯತ್‌ಗೆ ಮುತ್ತಿಗೆ ಹಾಕುವುದಾಗಿ ಅಬ್ದುಲ್ ಮಜೀದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.