ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರಕ್ಕೆ 29ರಂದು ಮುಸ್ಲಿಂ ಲೀಗ್ ಮಾರ್ಚ್, ಧರಣಿ
ವರ್ಕಾಡಿ: ವರ್ಕಾಡಿ ಗ್ರಾಮ ಪಂಚಾಯತ್ ಅಧೀನದಲ್ಲಿರುವ ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರದ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಂಬಂಧಪಟ್ಟವರು ಮುಂದಾಗದಿರುವು ದನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್ ಚಳವಳಿಗೆ ಮುಂದಾಗಿದೆ. ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಈ ಪ್ರದೇಶದ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಹೊರ ರೋಗಿ ವಿಭಾಗವು ಸಂಜೆ 6 ಗಂಟೆವರೆಗೆ ಹಾಗೂ ರಜಾ ದಿನಗಳಲ್ಲಿ ಮಧ್ಯಾಹ್ನದ ವರೆಗೆ ಕಾರ್ಯ ನಿರ್ವಹಿಸಬೇಕಾಗಿದ್ದು, ಈಗ ವಾರದ ಎಲ್ಲಾ ದಿನಗಳಲ್ಲಿ ಕೇವಲ ಮಧ್ಯಾಹ್ನ 12.30ರವರೆಗೆ ಮಾತ್ರ ಕಾರ್ಯನಿರ್ವ ಹಿಸುತ್ತಿದೆ. ರಜಾ ದಿನಗಳಲ್ಲಿ ರೋಗಿಗಳಿಗೆ ಸೇವೆ ದೊರಕುತ್ತಿಲ್ಲ.
ಈ ಕುಟುಂಬ ಆರೋಗ್ಯ ಕೇಂದ್ರವು ಗಡಿ ಪ್ರದೇಶದ ಬಡ ರೋಗಿಗಲಿಗೆ ಏಕ ಆಶ್ರಯವಾಗಿರುವುದರಿಂದ ಈ ಕುಟುಂಬ ಆರೋಗ್ಯ ಕೇಂದ್ರದ ಶೋಚನೀಯ ಸ್ಥಿತಿಯನ್ನು ಬಗೆಹರಿಸಲು ಗಮನ ಹರಿಸದಿರುವ ಜವಾ ಬ್ದಾರಿಯಿರುವ ಪಂಚಾಯತ್‌ನ ಆಡಳಿತ ಸಮಿತಿ ಹಾಗೂ ಸರಕಾರದ ನಿರ್ಲಕ್ಷ್ಯಕ್ಕೆ ಎದುರಾಗಿ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಸಮಿತಿಯಿಂದ ಜುಲೈ 29 ಬೆಳಿಗ್ಗೆ 10 ಗಂಟೆಗೆ ಕುಟುಂಬ ಆರೋಗ್ಯ ಕೇಂದ್ರಕ್ಕೆ ಮಾರ್ಚ್ ಹಾಗೂ ಧರಣಿ ನಡೆಸಲು ತೀರ್ಮಾನಿಸಲಾಯಿತು.
ಚಳವಳಿ ಬಗ್ಗೆ ಸಮಾಲೋಚಿಸಲು ಮುಸ್ಲಿಂ ಲೀಗ್, ಪೋಷಕ ಸಂಘಟನೆಗಳ ಪದಾಧಿಕಾರಿಗಳ ಸಂಯುಕ್ತ ಸಭೆ ಜುಲೈ 26 ಶುಕ್ರವಾರ ಸಂಜೆ 4.30ಕ್ಕೆ ನಡೆಸಲು ತೀರ್ಮಾನಿಸಲಾಯಿತು.