ವಶಪಡಿಸಲಾದ ಸ್ಥಳದ ಹಣ ನೀಡಿಲ್ಲ: ಸಬ್ ಕಲೆಕ್ಟರ್ ವಾಹನ ಜಪ್ತಿ

ಕಾಸರಗೋಡು: ವಶಪಡಿಸಲಾದ ಜಮೀನಿನ ಹಣ ನೀಡದ ಕಾರಣದಿಂದ ಹೊಸದುರ್ಗ ಸಬ್ ಕಲೆಕ್ಟರ್‌ರ ವಾಹನವನ್ನು ಹೊಸದುರ್ಗ ಸಬ್ ಕೋರ್ಟ್‌ನ ಆದೇಶ ಪ್ರಕಾರ ಜಪ್ತಿ ಕ್ರಮ ಕೈಗೊಳ್ಳಲಾಗಿದೆ.

ನೀಲೇಶ್ವರ- ಪಳ್ಳಿಕ್ಕೆರೆ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕಾಗಿ ಅಲ್ಲಿನ ಇ.ವಿ. ಶಾಂತ ಮತ್ತು ಇ.ವಿ. ರಮ ಎಂಬವರ ಸ್ಥಳವನ್ನು ೨೦೦೩ರಲ್ಲಿ ಸ್ವಾಧೀನಪಡಿಸಲಾಗಿತ್ತು. ಆ ಜಾಗಕ್ಕೆ ಸೆಂಟ್‌ಗೆ 2000 ರೂ.ನಂತೆ ನಷ್ಟ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಆ ಮೊತ್ತ ಕಡಿಮೆಯಾಗಿದೆ ಎಂದು ತೋರಿಸಿ ಶಾಂತ ಮತ್ತು ರಮ ಸ್ಪೆಷಲ್ ತಹಶೀಲ್ದಾರ್ (ಎಲ್.ಎ) ರಾಷ್ಟ್ರೀಯ ಹೆದ್ದಾರಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಹೊಸದುರ್ಗ ಸಬ್ ಕಲೆಕ್ಟರ್‌ರನ್ನು ಪ್ರತಿವಾದಿಗಳನ್ನಾಗಿಸಿ ಹೊಸದುರ್ಗ ಸಬ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ಆರು ತಿಂಗಳೊಳಗಾಗಿ 5.69 ಲಕ್ಷ ರೂ.ವನ್ನು ದೂರುದಾರರಿಗೆ ನೀಡುವಂತೆ ನಿರ್ದೇಶಿಸಿ ತೀರ್ಪು ನೀಡಿತ್ತು. ಆದರೆ ಆ ತೀರ್ಪು ಹೊರಬಂದು ಒಂದೂವರೆ ವರ್ಷ ಕಳೆದರೂ ಆ ಹಣ ದೂರುಗಾರರಿಗೆ ಲಭಿಸಿರಲಿಲ್ಲ.  ಅದನ್ನು ಪರಿಗಣಿಸಿದ ನ್ಯಾಯಾಲಯ ಬಡ್ಡಿ ಸಹಿತ ಒಟ್ಟು 13,67,379 ರೂ. ನೀಡುವಂತೆ ನಿರ್ದೇಶ ನೀಡಿತ್ತು. ಆದರೆ ಆ ಹಣ ನೀಡದೆ ಇರುವ ಕಾರಣದಿಂದಾಗಿ ಸಬ್ ಕಲೆಕ್ಟರ್‌ರ ವಾಹನವನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ಈಗ ಜಪ್ತಿಗೊಳಪಡಿಸಲಾಗಿದೆ. ಇದೇ ಜಾಗದ ಕುರಿತಾದ ಇತರ ಆರು ಕೇಸುಗಳೂ ಈಗ ನ್ಯಾಯಾಲಯದ ಪರಿಶೀಲನೆಯಲ್ಲಿದೆ.

Leave a Reply

Your email address will not be published. Required fields are marked *

You cannot copy content of this page