ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ತನಿಖೆತೀವ್ರಗೊಳಿಸಲು ಶಾಸಕ ಎಕೆಎಂ ಅಶ್ರಫ್ ಆಗ್ರಹ
ಪೈವಳಿಕೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ವಿದ್ಯಾರ್ಥಿನಿ ನಾಪತ್ತೆಯಾಗಿ 25 ದಿವಸ ಕಳೆದರೂ ಈಕೆಯ ಬಗ್ಗೆ ಯಾವುದೇ ಸೂಚನೆ ಲಭಿಸದಿರುವುದು ಖೇದಕರವಾಗಿದೆ ಎಂದು ತನಿಖೆಯನ್ನು ತೀವ್ರಗೊಳಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ, ಡಿಜಿಪಿಗೆ ಪತ್ರ ಬರೆಯುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ನಾಪತ್ತೆಯಾದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ಶಾಸಕರು ಹೆತ್ತವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
ಕಳೆದ ಫೆಬ್ರವರಿ 11ರಂದು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಕೂಲಿ ಕೆಲಸ ಮಾಡಿ ಬದುಕು ಸವೆಸುವ ಕುಟುಂಬದ ನಿರೀಕ್ಷೆಯಾಗಿದ್ದ ಬಾಲಕಿಯ ನಾಪತ್ತೆ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸುಳಿವು ಲಭಿಸದಿರುವುದರ ಬಗ್ಗೆ ನೋವನ್ನು ಹೆತ್ತವರು ಹಂಚಿಕೊಂಡಿದ್ದು, ಈ ಪ್ರಕರಣವನ್ನು ಕ್ರೈಮ್‌ಬ್ರಾಂಚ್ ಸಹಿತದ ತನಿಖಾ ತಂಡಗಳಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಪ್ರಕರಣದ ಬಗ್ಗೆ ವಿಧಾನಸಭಾ ಸಮ್ಮೇಳನದಲ್ಲಿ ಮುಖ್ಯಮಂತ್ರಿಯವರೊಂದಿಗೆ ನೇರವಾಗಿ ಮಾತುಕತೆ ನಡೆಸುವುದಾಗಿ ಶಾಸಕರು ಹೆತ್ತವರಿಗೆ ಭರವಸೆ ನೀಡಿದರು. ಶಾಸಕರೊಂದಿಗೆ ಪೈವಳಿಕೆ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಝಡ್.ಎ. ಕಯ್ಯಾರ್, ಅಸೀಸ್ ಚೇವಾರು, ಮನಾಫ್ ಸುಬ್ಬಯ್ಯಕಟ್ಟೆ ಮೊದಲಾದವರಿದ್ದರು.