ವಿವಿಧೆಡೆಗಳಲ್ಲಿ ಅಬಕಾರಿ ದಾಳಿ: ಮದ್ಯ, ಶೇಂದಿ ವಶ
ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮತ್ತು ಶೇಂದಿ ವಶಪಡಿಸಿಕೊಂಡಿದೆ. ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರ ಬಳಿ 25 ಲೀಟರ್ ತೆಂಗಿನ ಶೇಂದಿ ಕೈವಶವಿರಿಸಿದ ಮಂಗಲ್ಪಾಡಿ ಪಚ್ಲಂಪಾರೆಯ ಅನೀಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಕ್ಸೈಸ್ ಇನ್ಸ್ಪೆಕ್ಟರ್ ಗಂಗಾಧರನ್ ಕೆ.ಪಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಕಾಸರಗೋಡು ಅಬಕಾರಿ ರೇಂಜ್ನ ಪ್ರಿವೆಂಟೀವ್ ಆಫೀಸರ್ ರಂಜನ್ ಕೆ.ವಿ ನೇತೃತ್ವದ ತಂಡ ಮಧೂರು ಉಳಿಯತ್ತಡ್ಕ ಜಂಕ್ಷನ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಎಂಬಂತೆ 11 ಲೀಟರ್ ಕೇರಳ ಮದ್ಯ ಮತ್ತು 28.6 ಲೀಟರ್ ಬಿಯರ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಮಾಲು ಸಾಗಿಸಿದ ಆಟೋ ರಿಕ್ಷಾವನ್ನು ವಶಕ್ಕೆ ತೆಗೆದು ಕೊಂಡಿದ್ದು, ಅಲ್ಲದೆ ಸುರೇಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಚೆರ್ಕಳದಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 10.98 ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಕುಂಬ್ಡಾಜೆಯಲ್ಲಿ ೩.೬ ಲೀಟರ್ ಕರ್ನಾಟಕ ಮದ್ಯ ಕೈವಶವಿರಿಕೊಂಡ ಆರೋಪದಂತೆ ಮಾಲಿಂಗ ಮಣಿಯಾಣಿ ಎಂಬಾತನ ವಿರುದ್ಧ ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ದಿನೇಶನ್ ಕೆ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡಿದೆ.