ವಿವಿಧೆಡೆಗಳ ತ್ಯಾಜ್ಯ ಸಮಸ್ಯೆ: ಎಸ್ಎನ್ಪಿಐ ನ್ಯಾಯಾಲಯ ಸಮೀಪಿಸುವುದಾಗಿ ಮುಖಂಡರ ಹೇಳಿಕೆ
ಕುಂಬಳೆ: ರಾಜ್ಯದ ವಿವಿಧ ಭಾಗಗಳಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ವಿರುದ್ಧ ಎನ್ಎಸ್ಪಿಐ(ನೇಶನಲ್ ಸೆಕ್ಯುಲರ್ ಪಾರ್ಟಿ ಆಫ್ ಇಂಡಿಯ) ಕಾನೂನುಕ್ರಮಕ್ಕೆ ಮುಂದಾಗುತ್ತಿದೆ. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಅಡಿಯಲ್ಲಿ ರಸ್ತೆಗಳ ಇಕ್ಕಡೆಗಳಲ್ಲೂ ತ್ಯಾಜ್ಯವನ್ನು ಕತ್ತಲೆಯ ಮರೆಯಲ್ಲಿ ನಿಕ್ಷೇಪಿಸಲಾಗುತ್ತಿದೆ. ಶುಚಿತ್ವವಿರುವ ಸುಂದರ ಕೇರಳ ಎಂಬುದು ಎನ್ಎಸ್ಪಿಐ ಮುಂದಿಡುತ್ತಿದ್ದು, ಇದಕ್ಕೆ ಸಂಘಟನೆಯ ಆದ್ಯತೆ ಇದೆಯೆಂದು ರಾಜ್ಯ ಅಧ್ಯಕ್ಷ ಕೆ.ಪಿ. ಮುನೀರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ತ್ಯಾಜ್ಯ ಸಮಸ್ಯೆಗಳಿಗೆ ಒಂದು ತಿಂಗಳೊಳಗೆ ಪರಿಹಾರ ಉಂಟಾಗದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗುವುದು ಹಾಗೂ ನ್ಯಾಯಾಲಯವನ್ನು ಸಮೀಪಿಸಲಾಗುವುದೆಂದು ಅವರು ತಿಳಿಸಿದರು. ತ್ಯಾಜ್ಯದಿಂದ ಈಗಾಗಲೇ ಹಳದಿ ಕಾಮಾಲೆ, ಡೆಂಗ್ಯು ಜ್ವರ, ಮಲೇರಿಯ, ಚಿಕೂನ್ ಗುನಿಯ ಎಂಬ ಮಾರಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇದೆಲ್ಲವನ್ನು ಆರೋಗ್ಯ ಸಚಿವೆ ಹಾಗೂ ಉನ್ನತ ಅಧಿಕಾರಿಗಳು ಗಂಭೀರ ವಿಷಯವಾಗಿ ತೆಗೆದುಕೊಳ್ಳಬೇಕೆಂದು ಪಕ್ಷದ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ರಾಜ್ಯಾಧ್ಯಕ್ಷ ಕೆ.ಪಿ. ಮುನೀರ್, ಉಪಾಧ್ಯಕ್ಷ ಕೆ.ಎಚ್. ಖಾದರ್ ಹಾಜಿ, ಬಿ. ಮುಹಮ್ಮದ್ ಹಾಜಿ, ಎನ್ಎಸ್ಟಿಯು ರಾಜ್ಯಾಧ್ಯಕ್ಷ ಸಿ.ಎಂ. ಶೇಖುಞಿ, ಮುಹಮ್ಮದ್ ಹಾಜಿ ವರ್ಕಾಡಿ, ಕೆ. ನವಾಸ್, ಬದ್ರುದ್ದೀನ್ ಭಾಗವಹಿಸಿದರು.