ವಿವಿಧೆಡೆ ಅಬಕಾರಿ ದಾಳಿ: ಮದ್ಯ ವಶ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಎರಡೆಡೆಗೆ ನಡೆಸಿದ ದಾಳಿಯಲ್ಲಿ ಕರ್ನಾಟಕ ಮದ್ಯ ಹಾಗೂ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಕೈವಶವಿರಿಸಿದ ಮದ್ಯ ವಶಪಡಿಸಿಕೊಂಡಿದೆ.
ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್ ಮೆಂಟ್ ಆಂಡ್ ಆಂಟಿ ನರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್‌ರ ನೇತೃತ್ವದ ತಂಡ ಕಾಸರಗೋಡು ಅಡ್ಕತ್ತಬೈಲಿನಲ್ಲಿ ನಡೆಸಿದ ದಾಳಿಯಲ್ಲಿ ೧೨.೯೬ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿ ಅಪ್ಪುಟ್ಟ ಅಲಿಯಾಸ್ ಸಂಜಯ್ ಕುಮಾರ್ (35) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿ ಈ ವೇಳೆ ತಪ್ಪಿಸಿಕೊಂಡಿದ್ದನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅತುಲ್ ಟಿ.ವಿ., ಸೋನು ಸೆಬಾಸ್ಟಿಯನ್ ಮತ್ತು ಮಂಜುನಾಥ ಎಂಬವರು ಒಳಗೊಂಡಿದ್ದರು.
ಇದೇ ರೀತಿ ಕುಂಬಳೆ ಅಬಕಾರಿ ರೇಂಜ್‌ನ ಅಬಕಾರಿ ಅಧಿಕಾರಿಗಳು ಮತ್ತು ಕೆ.ಇ.ಎಂ.ಯು ಸಂಯುಕ್ತವಾಗಿ ಕುಂಬಳೆ- ಬದಿಯಡ್ಕ ರಸ್ತೆ ಬಳಿಯ ನಾರಾಯಣಮಂಗಲದಲ್ಲಿ ನಿನ್ನೆ ನಡೆದಿದೆ. ಕಾರ್ಯಾಚರಣೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೇರಳ ನಿರ್ಮಿತ ಮದ್ಯ ಪತ್ತೆಹಚ್ಚಿದೆ. ೧೧.೫೫ ಲೀಟರ್ ಬಿಯರ್ ಮತ್ತು ೩ ಲೀಟರ್ ಮದ್ಯ ಪತ್ತೆ ಹಚ್ಚಲಾಗಿದೆ. ಮಾಲು ಸಾಗಿಸಲು ಬಳಸಲಾದ ಸ್ಕೂಟರನ್ನು ಅಬಕಾರಿ ತಂಡ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ನಾರಾಯಣಮಂಗಲದ ಸನೋಜ್ ಬಿ.ವಿ. ಎಂಬಾತನ ವಿರುದ್ಧ ಕುಂಬಳೆ ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜಿ.ಯವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಿವೆಂಟಿವ್ ಆಫೀಸರ್ ರವೀಂದ್ರನ್ ಎಂ.ಕೆ. ಸಿಇಒಗಳಾದ ಮೋಹನ್ ಕುಮಾರ್, ಅಖಿಲೇಶ್ ಎಂ.ಎಂ. ಮತ್ತು ಸುರ್ಜಿತ್ ಕೆ. ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದಾರೆ.