ವೇತನ, ಪಿಂಚಣಿ ನೀಡಲು ಹಣವಿಲ್ಲ: ಭಾರೀ ಆರ್ಥಿಕ ಸಂದಿಗ್ಧತೆ; ರಾಜ್ಯದಲ್ಲಿ ಟ್ರಶರಿ ನಿಯಂತ್ರಣ
ತಿರುವನಂತಪುರ: ಒಂದೆಡೆ ಕೇರಳ ಸರಕಾರದ ನವಕೇರಳ ಸಭೆ ಕಾರ್ಯಕ್ರಮ ನಡೆಯುತ್ತಿದ್ದರೆ ಮತ್ತೊಂದೆಡೆ ಸರಕಾರದ ಖಜಾನೆಯಲ್ಲಿ ಹಣವಿಲ್ಲದೆ ಸರಕಾರಿ ನೌಕರರಿಗೆ ವೇತನ ಹಾಗೂ ಪಿಂಚಣಿ ನೀಡಲು ಹಣವಿಲ್ಲದೆ ಟ್ರಶರಿ ನಿಯಂತ್ರಣ ಹೇರಲಾಗಿದೆ. ಇನ್ನು ಮುಂದೆ ಒಂದು ಲಕ್ಷರೂಪಾಯಿಗಿಂತ ಹೆಚ್ಚು ಮೊತ್ತದ ಬಿಲ್‌ಗಳನ್ನು ನೀಡಿ ಹಣ ಪಡೆಯಬೇಕಾದರೆ ಟೋಕನ್ ವ್ಯವಸ್ಥೆ ಏರ್ಪಡಿಸಲಾಗಿದೆ.
ಸರಕಾರಿ ನೌಕರರಿಗೆ ತಿಂಗಳ ಮೊದಲ ಮೂರು ಕಚೇರಿ ದಿನಗಳಲ್ಲಿ ವೇತನ ನೀಡಲಾಗುತ್ತಿದೆ. ಮೊದಲ ದಿನ ಸೆಕ್ರೆಟರಿಯೇಟ್, ನ್ಯಾಯಾಲಯದ ನೌಕರರಿಗೆ, ಎರಡನೇ ದಿನ ಆರೋಗ್ಯ ವಿಭಾಗ ಹಾಗೂ ಪೊಲೀಸ್ ಇಲಾಖೆಯ ನೌಕರರಿಗೆ, ಮೂರನೇ ದಿನ ಅಧ್ಯಾಪಕರಿಗೆ ಹಾಗೂ ಇತರ ಇಲಾಖೆ ನೌಕರರಿಗೆ ವೇತನ ನೀಡಲಾಗುವುದು. ಮೂರನೇ ದಿನದಂದು ಕಾಲೇಜು ನೌಕರರಿಗೆ ಹಾಗೂ ಅಧ್ಯಾಪಕರಿಗೆ ವೇತನ ನೀಡಲು ಭಾರೀ ಮೊತ್ತ ಬೇಕಾಗಿಬರುತ್ತಿದೆ. ಇವರಿಗೆಲ್ಲಾ ನೀಡಿದ ಬಳಿಕ ಪಿಂಚಣಿದಾರರಿಗೆ ನೀಡಲಾಗುವುದು.
ರಾಜ್ಯದಲ್ಲಿ ಒಟ್ಟು ೫.೨೦ ಲಕ್ಷ ಸರಕಾರಿ ನೌಕರರು, ೫.೩೦ ಲಕ್ಷ ಪಿಂಚಣಿದಾರರಿದ್ದಾರೆ. ಇವರಿಗೆಲ್ಲಾ ವೇತನ ಹಾಗೂ ಪಿಂಚಣಿ ನೀಡಲು ೬೭೦೦ ಕೋಟಿ ರೂಪಾಯಿ ಬೇಕಾಗಿಬರುತ್ತಿದೆ.
ಕೇಂದ್ರ ಸರಕಾರಕ್ಕೆ ಯಥಾಸಮಯ ಲೆಕ್ಕಗಳನ್ನು ನೀಡದಿರುವುದೇ ಕಾಲೇಜು ಅಧ್ಯಾಪಕರಿಗೆ ವೇತನ ಸಮಯಕ್ಕೆ ಸರಿಯಾಗಿ ಲಭಿಸದಿರಲು ಕಾರಣವೆನ್ನಲಾಗಿದೆ. ಆದ್ದರಿಂದ ವೇತನಕ್ಕಾಗಿ ಖಜಾನೆಯಿಂದ ಹಣ ನೀಡಬೇಕಾಗುತ್ತಿದೆ.
ಇದೇ ವೇಳೆ ಗುತ್ತಿಗೆದಾರರಿಗೆ ೧೬,೦೦೦ ಕೋಟಿ ರೂಪಾಯಿ ನೀಡಲು ಬಾಕಿಯಿದೆ. ಈ ಮೊತ್ತ ವಿತgಣೆಯಾಗದಿರುವುದರಿಂದ ಗುತ್ತಿಗೆ ನೀಡಿದ ಕಾಮಗಾರಿಗಳೆಲ್ಲಾ ಮೊಟಕುಗೊಂಡಿದೆ. ಮಾತ್ರವಲ್ಲ ಈ ತಿಂಗಳಲ್ಲಿ ಸರಕಾರಿ ನೌಕರರಿಗೆ ವೇತನ ಮುಂಗಡವಾಗಿ ನೀಡಬೇಕಾಗಿಬರುವುದು. ಅಲ್ಲದೆ ಮೂರು ತಿಂಗಳ ಕ್ಷೇಮ ಪಿಂಚಣಿ ನೀಡಬೇಕಾಗಿದೆ. ಶಾಲಾ ಮಧ್ಯಾಹ್ನದೂಟ, ಸಿವಿಲ್ ಸಪ್ಲೈಸ್ ಮೊದಲಾದ ಅಗತ್ಯಗಳಿಗೆ ತುರ್ತಾಗಿ ಹಣ ಮಂಜೂರು ಮಾಡಬೇಕಾಗಿದೆ. ಇನ್ನು ಕೇಂದ್ರ ಸರಕಾರದಿಂದ ಹಣ ಪಡೆದು ಎಲ್ಲಾ ಆರ್ಥಿಕ ಸಂದಿಗ್ಧತೆಗಳಿಂದ ಪಾರಾಗಬಹುದೆಂದು ಭಾವಿಸಿದರೆ ಅದೂ ಸಾಧ್ಯವಿಲ್ಲ. ಯಾಕೆಂದರೆ ಇದುವರೆಗೆ ಕೇಂದ್ರದಿಂದ ಪಡೆಯಬಹುದಾದ ಹಣವನ್ನು ರಾಜ್ಯ ಸರಕಾರ ಈಗಾಗಲೇ ಪಡೆದುಕೊಂಡಿದೆ. ಇನ್ನು ಜನವರಿ, ಫೆಬ್ರವರಿ ತಿಂಗಳು ಹಣ ಮಾತ್ರವೇ ಕೇಂದ್ರದಿಂದ ಲಭಿಸಲು ಬಾಕಿಯಿದೆ. ಹೀಗಿರುವಾಗ ಟ್ರಶರಿ ನಿಯಂತ್ರಣ ಹೇರಿದರೂ ಆರ್ಥಿಕ ಸಂದಿಗ್ಧತೆಯಿಂದ ಪಾರಾಗಲು ಸರಕಾರಕ್ಕೆ ಸಾಧ್ಯವಿಲ್ಲವೆಂದು ಹಣಕಾಸು ಇಲಾಖೆ ಮೂಲಗಳು ಅಭಿಪ್ರಾಯಪಡುತ್ತಿವೆ.