ವ್ಯಾಪಾರಿಯ ನಿಗೂಢ ಸಾವು: ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯ
ವರ್ಕಾಡಿ: ಮಜೀರ್ಪಳ್ಳದಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಗೂಡಂಗಡಿ ವ್ಯಾಪಾರಿಯ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭಿಸಿದೆ.
ಸಾವಿನ ನಿಗೂಢತೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅಂತಿಮ ವರದಿ ಲಭಿಸಬೇಕಾದಲ್ಲಿ ಮರಣೋತ್ತರ ಪರೀಕ್ಷೆಯ ರಾಸಾಯನಿಕ ಫಲಿತಾಂಶ ಲಭಿಸಬೇಕಾಗಿದೆ. ಆದ್ದರಿಂದ ಈ ಬಗ್ಗೆ ಏನಾದರೂ ದೃಢೀಕರಿಸಬೇಕಾದರೆ ಅದುವರೆಗೆ ಕಾಯಬೇಕಾಗಿ ಬರಲಿದೆಯೆಂದು ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ತಿಳಿಸಿದ್ದಾರೆ.
ಮಜೀರ್ಪಳ್ಳ ಬದಿಯಾರಿನ ಅಶ್ರಫ್ (44) ಮೇ 6ರಂದು ಬೆಳಿಗ್ಗೆ ಮನೆಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಜಹ ಸಾವೆಂಬ ನೆಲೆಯಲ್ಲಿ ಕನ್ಯಾನದ ರಹ್ಮಾನಿಯ ಜುಮಾ ಮಸೀದಿಯ ಪರಿಸರದಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಆದರೆ ಈ ವೇಳೆ ಸಹೋದರ ಇಬ್ರಾಹಿಂ ಮಹಾರಾಷ್ಟ್ರದಲ್ಲಿದ್ದರು. ಅವರು ಊರಿಗೆ ಮರಳಿ ಬಂದ ಬಳಿಕ ಅಶ್ರಫ್ರ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಅನಂತರ ಆರ್ಡಿಒರ ಆದೇಶ ಪ್ರಕಾರ ಮೇ 13ರಂದು ಮೃತದೇಹವನ್ನು ಮೇಲಕ್ಕೆತ್ತಿ ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದರ ಪ್ರಾಥಮಿಕ ವರದಿ ಈಗ ಲಭಿಸಿದೆ. ಮೃತದೇಹವನ್ನು ದಫನಗೈದ 17 ದಿನಗಳ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿನ ಬಗ್ಗೆ ಹುಟ್ಟಿಕೊಂಡ ನಿಗೂಢತೆ ಪೂರ್ಣವಾಗಿ ದೂರವಾಗಬೇಕಾದರೆ ರಾಸಾಯನಿಕ ತಪಾಸಣಾ ವರದಿ ಲಭಿಸುವವರೆಗೆ ಕಾಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.