ವ್ಯಾಪಾರ ಸಂರಕ್ಷಣಾ ಜಾಥಾಕ್ಕೆ ಕಾಸರಗೋಡಿನಿಂದ ಚಾಲನೆ
ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೇತೃತ್ವದಲ್ಲಿ ಕಿರು ವ್ಯಾಪಾರಿ ವಲಯದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಹಲವಾರು ಮನವಿಗಳನ್ನು ಮುಖ್ಯಮಂತ್ರಿಗೂ, ವಿವಿಧ ಇಲಾಖೆ ಸಚಿವರಿಗೂ ನೀಡಿದರೂ ಸೂಕ್ತ ತೀರ್ಮಾನ ಉಂಟಾಗದ ಹಿನ್ನೆಲೆಯಲ್ಲಿ ವಿವಿಧ ೨೯ ಬೇಡಿಕೆಗಳನ್ನು ಮುಂದಿಟ್ಟು ವ್ಯಾಪಾರ ಸಂರಕ್ಷಣೆ ಹೆಸರಿನಲ್ಲಿ ನಿನ್ನೆ ಜಾಥಾ ಆರಂಭಿಸಲಾಗಿದ್ದು, ಫೆ. ೧೩ರ ವರೆಗೆ ರಾಜ್ಯದಾದ್ಯಂತ ಸಂಚಾರ ನಡೆಸಲಿದೆ. ತಿರುವನಂತಪುರ ಪುತ್ತರಿಕಂಡಂ ಮೈದಾನದಲ್ಲಿ ಜಾಥಾ ಸಮಾಪ್ತಿಯಾಗಲಿದ್ದು, ಈ ವೇಳೆ ವಿವಿಧ ಕಡೆಗಳಿಂದ ಸಂಗ್ರಹಿಸಿದ ೫ ಲಕ್ಷ ವ್ಯಾಪಾರಿಗಳ ಸಹಿ ಮುಖ್ಯಮಂತ್ರಿಗೆ ಹಸ್ತಾಂತರಿಸಲಾಗುವುದು. ಸಮಿತಿಯ ರಾಜ್ಯ ಅಧ್ಯಕ್ಷ ರಾಜು ಅಪ್ಸರ ಮುನ್ನಡೆಸುವ ಜಾಥಾವನ್ನು ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್‌ರ ಅಧ್ಯಕ್ಷತೆಯಲ್ಲಿ ರಾಜ್ಯ ಸಮಿತಿ ಉಪಾಧ್ಯಕ್ಷ ಪೆರಿಂಙಮಲ ರಾಮಚಂದ್ರನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಮಿತಿ ಮುಖಂಡರಾದ ದೇವಸ್ಯ ಮೇಚ್ಚೇರಿ, ಪಿ. ಕುಂಞಾವುಹಾಜಿ, ಎಸ್. ದೇವರಾಜನ್, ಕೆ.ವಿ. ಅಬ್ದುಲ್ ಹಮೀದ್, ಎಂ.ಕೆ. ಥೋಮಸ್ ಕುಟ್ಟಿ, ಕೆ.ಜೆ. ಸಜಿ, ರೇಖಾ ಮೋಹನಾದಾಸ್, ಕೆ. ಸತ್ಯಕುಮಾರ್, ಟಿ.ಎ. ಇಲ್ಯಾಸ್ ಸಹಿತ ಹಲವರು ಭಾಗವಹಿಸಿದರು.