ಶಬರಿಮಲೆ ಕ್ಷೇತ್ರ ಹೊಂದಿರುವ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರ ಈ ಬಾರಿ ಯಾರಿಗೆ ಒಲಿಯಬಹುದು
ತಿರುವಲ್ಲ: ಅಂತಾರಾಷ್ಟ್ರೀಯ ತೀರ್ಥಾಟಕ ಕೇಂದ್ರಗಳಲ್ಲೊಂ ದಾಗಿರುವ ಶಬರಿಮಲೆ ಕ್ಷೇತ್ರ ನೆಲೆಗೊಂಡಿರುವ ಲೋಕಸಭಾ ಕ್ಷೇತ್ರವಾಗಿದೆ ಪತ್ತನಂತಿಟ್ಟ.
೨೭ ವರ್ಷಗಳ ಹಿಂದೆ ಪತ್ತನಂತಿಟ್ಟ ಎಂಬ ಲೋಕಸಭಾ ಕ್ಷೇತ್ರವಿರಲಿಲ್ಲ. ಅನಂತರವೇ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ೨೦೦೯ರಲ್ಲಿ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರವನ್ನು ಪುನರೇಕೀ ಕರಣಗೊಳಿಸಲಾಗಿತ್ತು. ಆ ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲಿ ಈ ಕ್ಷೇತ್ರ ಯುಡಿಎಫ್‌ಗೆ ಒಲಿಯುತ್ತಾ ಬಂದಿದೆ. ಈ ಕ್ಷೇತ್ರದಲ್ಲಿ ಸಂಸದರಾಗಿರುವ ಕಾಂಗ್ರೆಸ್‌ನ ಆಂಟೋ ಆಂಟನಿಯವರು ಕಳೆದ ೧೫ ವರ್ಷಗಳಿಂದ ಈ ಲೋಕಸಭಾ ಕ್ಷೇತ್ರದಲ್ಲಿ ಆ ಗೆಲುವಿನ ಓಟ ಮುಂದುವರಿಸಿದ್ದಾರೆ. ಅದನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲ್ಲೂ ಮುಂದುವರಿಸುವ ಪ್ರಯತ್ನದಲ್ಲಿ ಈಗಾಗಲೇ ತೊಡಗಿದ್ದಾರೆ. ಪುನರೇಕೀ ಕರಣಗೊಳಿಸಿದ ಬಳಿಕ ೨೦೦೯ರಲ್ಲಿ ನಡೆದ ಚುನಾವಣೆಯಲ್ಲಿ ಯುಡಿಎಫ್ (ಕಾಂಗ್ರೆಸ್) ಆಂಟೋ ಆಂಟನಿಯ ವರು ೧,೧೨,೨೦೬ ಮತಗಳ ಅಂತರದಲ್ಲಿ ಎಡರಂಗದ ಕೆ. ಅನಂತ ಗೋಪನ್‌ರನ್ನು ಪರಾಜಯಗೊಳಿ ಸಿದ್ದರು. ಆನಂತರ ನಡೆದ ಚುನಾವಣೆಗಳಲ್ಲೆಲ್ಲಾ ಯುಡಿಎಫ್‌ನ ಆಂಟೋ ಆಂಟನಿಯವರೇ ಗೆಲುವು ಸಾಧಿಸುತ್ತಾ ಬಂದಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದೆ. ಇದರ ಹೊರತಾಗಿ ಕೋಟ್ಟಯಂ ಜಿಲ್ಲೆಗೆ ಸೇರಿರುವ ಪೂಙಾರ್ ಮತ್ತು ಕಾಂಞಿರಪಳ್ಳಿ ವಿಧಾನಸಭೆಗಳೂ ಪತ್ತನಂತಿಟ್ಟ ಲೋಕ ಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿವೆ.
ಈ ಕ್ಷೇತ್ರದಲ್ಲಿ ಈಬಾರಿ ಯುಡಿಎಫ್ ಉಮೇದ್ವಾ ರರಾಗಿ ಸಂಸದ ಆಂಟೋ ಆಂಟನಿ, ಎಡರಂಗ ಉಮೇದ್ವಾರರಾಗಿ ಮಾಜಿ ಸಚಿವ ಡಾ. ಥೋಮಸ್ ಐಸಾಕ್ ಮತ್ತು ಎನ್‌ಡಿಎ ಉಮೇದ್ವಾರರಾಗಿ ಬಿಜೆಪಿಯ ಯುವಜನ ನೇತಾರ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಕ್ತಾರರೂ ಆಗಿರುವ ಎ.ಕೆ. ಅನಿಲ್ ಆಂಟನಿ ಸ್ಪರ್ಧಿಸುತ್ತಿದ್ದಾರೆ. ಇವರು ಕಾಂಗ್ರೆಸ್‌ನ ಅತ್ಯಂತ ಹಿರಿಯ ನೇತಾರ, ಮಾಜಿ ಮುಖ್ಯಮಂತ್ರಿ ಸಚಿವರೂ ಆಗಿರುವ ಆಂಟನಿಯವರ ಪುತ್ರನಾಗಿದ್ದಾರೆ. ಆದ್ದರಿಂದ ಪತ್ತನಂತಿಟ್ಟದಲ್ಲಿ ಈ ಬಾರಿ ಅನಿಲ ಆಂಟನಿಯವರ ಗೆಲುವು ಸುನಿಶ್ಚಿತ ವೆಂಬ ತುಂಬು ನಿರೀಕ್ಷೆಯನ್ನು ಬಿಜೆಪಿ ವ್ಯಕ್ತಪಡಿಸಿದೆ.
ಇದು ಮಾತ್ರವಲ್ಲ ತನ್ನ ಗೆಲುವನ್ನು ಉಳಿಸಲು ಆಂಟೋ ಆಂಟನಿಯವರು ತೀವ್ರ ಯತ್ನದಲ್ಲಿ ತೊಡಗಿದರೆ, ಗೆಲುವನ್ನು ಯುಡಿಎಫ್‌ನಿಂದ ಕಸಿದುಕೊಳ್ಳುವ ತೀವ್ರ ಯತ್ನದಲ್ಲಿ ಇನ್ನೊಂದೆಡೆ ಎಡರಂಗದ ಡಾ. ಥೋಮಸ್ ಐಸಾಕ್ ತೊಡಗಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಪತ್ತನಂತಿಟ್ಟ ಜಿಲ್ಲೆಯಲ್ಲಿ ಈಬಾರಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದರಿಂದಾಗಿ ವಿಜಯಲಕ್ಷ್ಮಿಯ ಅನುಗ್ರಹ ಯಾರ ಮೇಲೆ ಇರಬಹು ದೆಂಬುವುದನ್ನು ಸದ್ಯ ನಿರೀಕ್ಷಿಸಲು ಸಾಧ್ಯವಾಗದ ಸ್ಥಿತಿ ಈಗಿದೆ.