ಶಬರಿಮಲೆ: ಭಕ್ತರ ದರ್ಶನ ವಿಷಯ; ದೇವಸ್ವಂ ಮಂಡಳಿ-ಎಡಿಜಿಪಿ ನಡುವೆ ವಾಗ್ವಾದ
ಶಬರಿಮಲೆ: ಶಬರಿಮಲೆ ಕ್ಷೇತ್ರಕ್ಕೆ ಹರಿದುಬರುತ್ತಿರುವ ಭಕ್ತಜನರ ಪ್ರವಾಹ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವಂತೆಯೇ ಹದಿನೆಂಟು ಮೆಟ್ಟಿಲು ಮೂಲಕ ಭಕ್ತರನ್ನು ಏರಿಸುವ ವಿಷಯದಲ್ಲಿ ಮುಜರಾಯಿ ಮಂಡಳಿ ಅಧ್ಯಕ್ಷರು ಮತ್ತು ಶಬರಿಮಲೆಯಲ್ಲಿ ಪೊಲೀಸ್ ಭದ್ರತೆಯ ಪ್ರಧಾನ ಸಂಯೋಜ ಕರಾಗಿ ನೇಮಿಸಲಾಗಿರುವ ಎಡಿಡಿಪಿ ಎಂ.ಆರ್. ಅಜಿತ್ ಕುಮಾರ್ ಮಧ್ಯೆ ಇದೀಗ ಪರಸ್ಪರ ವಾಗ್ವಾದ ತಲೆಯೆತ್ತಿದೆ.
ಶಬರಿಮಲೆಯಲ್ಲಿ ಹದಿನೆಂಟು ಮೆಟ್ಟಿಲು ಮೂಲಕ ಪ್ರತೀ ನಿಮಿಷಕ್ಕೆ ತಲಾ ೬೦ರಂತೆ ಭಕ್ತರನ್ನು ಹತ್ತಿಸಲು ಮಾತ್ರವೇ ಸಾಧ್ಯವಾಗಲಿದೆಯೆಂದು ಎಡಿಜಿಪಿ ಅಜಿತ್ ಕುಮಾರ್ ಹೇಳಿದರೆ, ನಿಮಿಷಕ್ಕೆ ೭೫ಕ್ಕಿಂತಲೂ ಹೆಚ್ಚು ಭಕ್ತರನ್ನು ಹತ್ತಿಸಲಾಗಿದೆ ಯೆಂದು ದೇವಸವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹೇಳಿದ್ದು, ಅದು ಅವರಿಬ್ಬರ ನಡುವೆ ಪರಸ್ಪರ ವಾಗ್ವಾದಕ್ಕೂ ದಾರಿಮಾಡಿಕೊಟ್ಟಿದೆ. ತೀರ್ಥಾಟಕರ ಸಂಖ್ಯೆ ವಿಷಯದಲ್ಲಿ ಮುಜರಾಯಿ ಮಂಡಳಿ ಸುಳ್ಳು ಲೆಕ್ಕ ನೀಡುತ್ತಿದೆಯೆಂದು ಎಡಿಜಿಪಿ ಹೇಳಿದ್ದಾರೆ. ಆದರೆ ಎಡಿಜಿಪಿ ನೀಡಿದ ಹೇಳಿಕೆಯನ್ನು ತಿದ್ದಲು ಅವರು ತಯಾರಾಗಬೇಕೆಂದು ಅಧ್ಯಕ್ಷರು ಆಗ್ರಹಪಟ್ಟಿದ್ದಾರೆ.
ಇದನ್ನು ಗಮನಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಕ್ಷಣ ಮಧ್ಯಪ್ರವೇಶಿಸಿ ನಿಬಿಡತೆಗೆ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ವಿವಾದ ಅಥವಾ ವಾಗ್ವಾದದಲ್ಲಿ ಯಾರೂ ತೊಡಗದೆ ಎಲ್ಲರೂ ಪರಸ್ಪರ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳ ಬೇಕೆಂಬ ನಿರ್ದೇಶ ನೀಡಿದ್ದಾರೆ. ಮುಜರಾಯಿ ಮಂಡಳಿ ಮತ್ತು ಪೊಲೀಸ್ ಇಲಾಖೆ ಮಧ್ಯೆ ವಿವಾದ ವೇರ್ಪಟ್ಟಿದೆ ಎಂಬ ರೀತಿಯ ಪ್ರಚಾರವೂ ಈಗ ಉಂಟಾಗಿದೆ. ಶಬರಿಮಲೆಯಲ್ಲಿ ಭಕ್ತರ ನಿಬಿಡತೆ ತಲೆದೋರುತ್ತಿರುವುದು ಇದು ಮೊದಲಬಾರಿ ಏನೂ ಅಲ್ಲ. ಅಂತಹ ಅನುಭವ ಈ ಹಿಂದೆಯೂ ಉಂಟಾಗಿತ್ತು. ಆಗಲೆಲ್ಲಾ ಅದನ್ನು ಪೊಲೀಸರೇ ಪರಿಹರಿಸಿದ್ದರು. ಶಬರಿಮಲೆಯಲ್ಲಿ ಭಕ್ತರ ನಿಬಿಡತೆ ಈಗ ಕ್ರಮಾತೀತವಾಗತೊಡಗಿದೆ ಎಂಬುವುದು ಸತ್ಯ. ಅದನ್ನು ನಿಯಂತ್ರಿಸಲಾಗುವುದು. ಶಬರಿಮಲೆಗೆ ಹಣದ ವಿಷಯ ಎಂದೂಒಂದು ಸಮಸ್ಯೆಯಾಗದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.