ಶಬರಿಮಲೆ: ಮಂಡಲ ಕಾಲದ ತೀರ್ಥಾಟನೆಗೆ ಚಾಲನೆ
ಶಬರಿಮಲೆ: ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ನಿನ್ನೆ ಸಂಜೆ ತೆರೆಯುವುದರೊಂದಿಗೆ ಈ ಬಾರಿಯ ಮಂಡಲ ಕಾಲದ ತೀರ್ಥಾಟನೆಗೆ ಚಾಲನೆ ಲಭಿಸಿತು. ನಿನ್ನೆ ಸಂಜೆ ೫ ಗಂಟೆಗೆ ತಂತ್ರಿ ಕಂಠರ ಮಹೇಶ್ ಮೋಹನರ್ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕ ಕೆ. ಜಯರಾಮನ್ ನಂಬೂದಿರಿ ಕ್ಷೇತ್ರದ ಬಾಗಿಲು ತೆರೆದು ದೀಪ ಬೆಳಗಿಸಿದರು.
ಇಂದು ಮುಂಜಾನೆ ೩ ಗಂಟೆಗೆ ಮುಖ್ಯ ಅರ್ಚಕ ಪಿ.ಎನ್. ಮಹೇಶ್ ನಂಬೂದಿರಿ ಕ್ಷೇತ್ರದ ಬಾಗಿಲು ತೆರೆದರು. ಅನಂತರ ತುಪ್ಪಾಭಿಷೇಕ ಸಹಿತ ವಿವಿಧ ಸೇವೆಗಳು ಆರಂಭಗೊಂಡಿತು. ಕ್ಷೇತ್ರದ ಬಾಗಿಲು ತೆರೆಯುವುದರೊಂದಿಗೆ ಶ್ರೀ ದೇವರ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಭಕ್ತರು ಭಾರೀ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ತಲುಪತೊಡಗಿದ್ದಾರೆ. ಈ ಬಾರಿ ಈ ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಥಾಟಕರು ತಲುಪಲಿದ್ದಾರೆಂಬ ನಿರೀಕ್ಷೆ ಮೇರೆಗೆ ಅವರಿಗೆ ಅಗತ್ಯವುಳ್ಳ ಸೌಕರ್ಯಗಳನ್ನು ಏರ್ಪಡಿಸಿರುವುದಾಗಿ ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.