ಶಾಲಾ ವರಾಂಡದಲ್ಲಿ ನವಜಾತ ಶಿಶುವನ್ನು ಉಪೇಕ್ಷಿಸಿದ ತಾಯಿಯ ಬಂಧನ: ಮಗು ಗಂಭೀರ ಸ್ಥಿತಿಯಲ್ಲಿ
ಅಡೂರು: ಪಂಜಿಕಲ್ಲಿನ ಶಾಲಾ ವರಾಂಡದಲ್ಲಿ ನವಜಾತ ಶಿಶುವನ್ನು ಉಪೇಕ್ಷಿಸಿದ ಘಟನೆಗೆ ಸಂಬಂಧಿಸಿ ಮಗುವಿನ ತಾಯಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಆದೂರು ಠಾಣೆಯ ಇನ್ಸ್ಪೆಕ್ಟರ್ ಸುನು ಹಾಗೂ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಯುವತಿಯನ್ನು ಬಂಧಿಸಲಾಗಿದೆ. ಬಳಿಕ ಮಗುವನ್ನು ಉಪೇಕ್ಷಿಸಿದ ಶಾಲೆ ಪರಿಸರಕ್ಕೆ ಆರೋಪಿಯನ್ನು ಕರೆದೊಯ್ದು ಮಾಹಿತಿ ಸಂಗ್ರಹಿಸಲಾಯಿತು. ಇದೇ ವೇಳೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಆದಿತ್ಯವಾರ ಮಧ್ಯಾಹ್ನ ಪಂಜಿಕಲ್ನ ಶಾಲೆ ವರಾಂಡದಲ್ಲಿ ನವಜಾತ ಹೆಣ್ಣು ಮಗು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶಾಲಾ ವರಾಂಡದಿಂದ ಮಗು ಅಳುತ್ತಿರುವುದು ಕೇಳಿದ ಹಿನ್ನೆಲೆಯಲ್ಲಿ ನಾಗರಿಕರು ಅಲ್ಲಿಗೆ ತಲುಪಿದ್ದು, ಈ ವೇಳೆ ಉಪೇಕ್ಷಿತ ಸ್ಥಿತಿಯಲ್ಲಿ ಮಗು ಪತ್ತೆಯಾಗಿತ್ತು. ಪೊಲೀಸರು ತಲುಪಿ ಮಗುವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರು. ಅನಂತರ ಪೊಲೀಸರು ಹಲವು ಮನೆಗಳಿಗೆ ತೆರಳಿ ನಡೆಸಿದ ಕಾರ್ಯಾಚರಣೆಯಲ್ಲಿ ಮಗುವಿನ ತಾಯಿಯನ್ನು ಪತ್ತೆಹಚ್ಚಲಾಗಿದೆ. ಮಗುವಿನ ತಾಯಿ ಅವಿವಾಹಿತೆಯೆಂದು ಪೊಲೀಸರು ತಿಳಿಸಿದ್ದಾರೆ.