ಶಿರಸ್ತ್ರಾಣ ಧರಿಸದವರ ವಿರುದ್ಧ ವಿವಾದ ಹೇಳಿಕೆ: ಸಮಸ್ತ ಮುಖಂಡ ಉಮ್ಮರ್ ಫೈಸಿ ವಿರುದ್ಧ ಕೇಸು
ಕಲ್ಲಿಕೋಟೆ: ಶಿರಸ್ತ್ರಾಣ ಧರಿಸದವರ ವಿರುದ್ಧ ಅವಮಾನಕರ ರೀತಿಯಲ್ಲಿ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಇ.ಕೆ ವಿಭಾಗ ಮುಶಾವರ ಜೊತೆ ಕಾರ್ಯದರ್ಶಿ ಉಮ್ಮರ್ ಫೈಸಿ ಮುಕ್ಕತ್ತ್ ನೀಡಿದ ಹೇಳಿಕೆ ವಿವಾದವಾಗಿದ್ದು, ಇವರ ವಿರುದ್ಧ ನಡಕ್ಕಾವ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಜಾಮೀನುರಹಿತ ಪ್ರಕರಣ ದಾಖಲಿಸಲಾಗಿದೆ. ಕೋಮು ಭಾವನೆಯನ್ನು ಕೆರಳಿಸುವ, ಮತೀಯ ಸ್ಪರ್ಧೆ ಬೆಳೆಸುವ, ಮಹಿಳೆಯರನ್ನು ಅವಮಾನಗೈಯ್ಯುವ ಕಾಯ್ದೆಗಳಂತೆ ಕೇಸು ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ, ‘ನಿಸಾ’ದ ಅಧ್ಯಕ್ಷೆಯಾದ ವಿ.ಪಿ. ಸುಹರಾ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಕಳೆದ ಅಕ್ಟೋಬರ್ ೮ರಂದು ಕಲ್ಲಿಕೋಟೆ ನಲ್ಲಳಂ ಸರಕಾರಿ ಹೈಸ್ಕೂಲ್‌ನಲ್ಲಿ ನಡೆದ ಕುಟುಂಬಶ್ರೀ ಕಾರ್ಯಕ್ರಮದಲ್ಲಿ ಸಮಸ್ತ ಮುಖಂಡನ ಹೇಳಿಕೆಯನ್ನು ವಿರೋಧಿಸಿ ಸುಹರಾ ಶಿರಸ್ತ್ರಾಣವನ್ನು ತೆಗೆದು ಪ್ರತಿಭಟಿಸಿದ್ದರು. ಸುಹರಾ ಈ ಬಗ್ಗೆ ಕಲ್ಲಿಕೋಟೆ ಸಿಟಿ ಪೊಲೀಸ್ ಕಮಿಷನರ್ ರಾಜ್‌ಪಾಲ್ ಮೀನಾರಿಗೆ ದೂರು ನೀಡಿದ್ದರು. ಆದರೆ ಆ ದೂರಿನಲ್ಲಿ ಕೇಸು ದಾಖಲಿಸಿರಲಿಲ್ಲ. ಅದರ ಬಳಿಕ ಒಂದು ತಿಂಗಳ ಹಿಂದೆ ಮತ್ತೊಮ್ಮೆ ನಡಕ್ಕಾವ್ ಪೊಲೀಸರಿಗೆ ದೂರು ನೀಡಿದರು. ಈ ದೂರಿನಂತೆ ಈಗ ಕೇಸು ದಾಖಲಿಸಲಾಗಿದೆ.
ಇದೇ ವೇಳೆ ಉಮ್ಮರ್ ಫೈಸಿ ಮುಕ್ಕತ್ತ್ ವಿರುದ್ಧ ಕೇಸು ದಾಖಲಿಸಿರುವುದು ಮಹಿಳೆಯರ ಜಯವೆಂದು ವಿ.ಪಿ. ಸುಹರಾ ಪ್ರತಿಕ್ರಿಯಿಸಿದ್ದಾರೆ. ಫೈಸಿಯನ್ನು ಬಂಧಿಸುವವರೆಗೆ ಈ ಪ್ರಕರಣದಲ್ಲಿ ಹೋರಾಡುವುದಾಗಿ ಅವರು ತಿಳಿಸಿದ್ದಾರೆ. ಧಾರ್ಮಿಕ ಮುಖಂಡರ ಪರಾಮರ್ಶೆಗಳು ಧರ್ಮವನ್ನು ಪ್ರಾಕೃತವಾಗಿ ಕಾಣುವುದಕ್ಕೆ ದಾರಿಯಾಗುವುದಾಗಿಯೂ ಮುಸ್ಲಿಂ ಮಹಿಳೆಯರನ್ನು ದ್ವಿತೀಯ ದರ್ಜೆಯ ಮಹಿಳೆಯರಾಗಿ ಕಾಣುವ ಧಾರ್ಮಿಕ ನೇತೃತ್ವದ ನಿಲುವು ವಿರುದ್ಧ ಕೊನೆ ತನಕ ಹೋರಾಡುವುದಾಗಿ ಅವರು ನುಡಿದರು. ಇದೇ ವೇಳೆ ಶಿರಸ್ತ್ರಾಣ ಧರಿಸದವರ ವಿರುದ್ಧ ತಾನು ಅಪಮಾನಕರ ಹೇಳಿಕೆ ನೀಡಿಲ್ಲವೆಂದು ಉಮ್ಮರ್ ಫೈಸಿ ಪ್ರತಿಕ್ರಿಯಿಸಿದ್ದಾರೆ. ಎರಡು ತಿಂಗಳ ಬಳಿಕ ಈಗ ಕೇಸು ದಾಖಲಿಸಿರುವುದು ಯಾಕೆಂದು ಅರ್ಥವಾಗುತ್ತಿಲ್ಲವೆಂದು ಅವರು ನುಡಿದಿದ್ದಾರೆ.