ಶಿರಿಯ ಹೊಳೆಗೆ ಅಡ್ಡವಾಗಿ ಅಣೆಕಟ್ಟು ನಿರ್ಮಾಣ ಯೋಜನೆ: 30 ಕೋಟಿ ರೂ.ಗಳ ಕಾಮಗಾರಿ ಮೊಟಕು
ಕುಂಬಳೆ: ಕುಂಬಳೆ ಪಂಚಾಯತ್‌ನ ಬಂಬ್ರಾಣ ಹಾಗೂ ಮಂಗಲ್ಪಾಡಿ ಪಂಚಾಯತ್‌ನ ಇಚ್ಲಂಗೋಡು ಪ್ರದೇಶಗಳನ್ನು ಸಂಪರ್ಕಿಸಿ ಶಿರಿಯ ಹೊಳೆಗೆ ಅಡ್ಡವಾಗಿ 30.60 ಕೋಟಿ ರೂಪಾಯಿ ಖರ್ಚಿನಲ್ಲಿ ನಿರ್ಮಿಸುವ ರೆಗ್ಯುಲೇಟರ್ ಕಂ ಬ್ರಿಡ್ಜ್‌ನ ಕಾಮಗಾರಿ ಮೊಟಕುಗೊಂಡಿದೆ. ಒಂದು ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಬಂಬ್ರಾಣ ಭಾಗದಲ್ಲಿ ರಸ್ತೆಗೆ 200 ಮೀಟರ್ ಆವರಣಗೋಡೆ, ಸ್ವಲ್ಪ ಪ್ರದೇಶದಲ್ಲಿ ಕಾಂಕ್ರೀಟ್ ತಡೆಗೋಡೆ ಮಾತ್ರ ನಿರ್ಮಿಸಲಾಗಿದೆ. ಅನಂತರ ಯಾವುದೇ ಕಾಮಗಾರಿ ಇಲ್ಲಿ ನಡೆದಿಲ್ಲ. ಹೊಳೆಯ ಮಣ್ಣು ತಪಾಸಣೆ ಮತ್ತಿತರ ಕಾರ್ಯಗಳು ಈ ಹಿಂದೆಯೇ ಪೂರ್ತಿಗೊಳಿಸಲಾಗಿತ್ತು. ಕಾಮಗಾರಿಗಾಗಿ ಇಲ್ಲಿಗೆ ತಲುಪಿಸಿದ ಉಪಕರಣಗಳು, ಯಂತ್ರಗಳು, ಅಲ್ಲಿಯೇ ತಟಸ್ಥಗೊಂಡಿವೆ. ಇಲ್ಲಿ ಕಳೆದ ಮೂರು ತಿಂಗಳಿಗಿಂತ ಹೆಚ್ಚು ಕಾಲದಿಂದ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆ ನಡೆಯಲಿಲ್ಲವೆಂದು ದೂರಲಾಗಿದೆ. ನೌಕರರಿಲ್ಲದುದರಿಂದ ಕ್ಯಾಂಪ್ ಆಫೀಸ್ ಮುಚ್ಚುಗಡೆಗೊಳಿಸಲಾಗಿದೆ. ಯುಎಲ್‌ಸಿಸಿ ಈ ಕಾಮಗಾರಿಯನ್ನು ವಹಿಸಿಕೊಂಡಿತ್ತು. ಮಳೆ ನಿರ್ಮಾಣ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮಳೆಯ ತೀವ್ರತೆ ಕಡಿಮೆಯಾಗಿ ಒಂದು ತಿಂಗಳಾಗುತ್ತಾ ಬಂದರೂ ನಿರ್ಮಾಣ ಪುನರಾರಂಭಿಸದಿರುವುದು ಸ್ಥಳೀಯರಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಆರ್‌ಐಡಿಎಫ್‌ನಲ್ಲಿ ಒಳಪಡಿಸಿ ಈ ಯೋಜನೆ ಜ್ಯಾರಿಗೊಳಿಸಲಾಗುತ್ತಿದೆ. ಹಳೆಯ ಅಣೆಕಟ್ಟಿನ ಬದಲಾಗಿ 118 ಮೀಟರ್ ಉದ್ದದಲ್ಲಿ ಉಪ್ಪುನೀರು ಪ್ರತಿರೋಧ ರೆಗ್ಯುಲೇಟರ್ ಕಂ ಬ್ರಿಡ್ಜ್ ಇಲ್ಲಿ ನಿರ್ಮಿಸಲು ಯೋಜನೆಯಿರಿಸಲಾಗಿದೆ. ಸಮುದ್ರದಿಂದ ಉಪ್ಪು ನೀರು ಹರಿದು ಬರುವುದನ್ನು ತಡೆಯುವುದರ ಜೊತೆಗೆ ಕುಂಬಳೆ, ಮಂಗಲ್ಪಾಡಿ ಪಂಚಾಯತ್‌ಗಳ 999 ಹೆಕ್ಟೆರ್ ಕೃಷಿ ಭೂಮಿಯನ್ನು ಸಂರಕ್ಷಿಸುವುದು ಈ ಯೋಜನೆಯ ಗುರಿಯಾಗಿದೆ. ಪರಿಸರ ಪ್ರದೇಶಗಳ ಭೂಗರ್ಭ ಜಲಮಟ್ಟ ಹೆಚ್ಚಿಸಲು ಕೂಡಾ ಇದು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವು ದರೊಂದಿಗೆ ಮಂಗಲ್ಪಾಡಿ, ಕುಂಬಳೆ ಪಂಚಾಯತಗಳ ಇಚ್ಲಂಗೋಡು, ಬಂಬ್ರಾಣ ಪ್ರದೇಶಗಳ ನಾಗರಿಕರ ದೀರ್ಘ ಕಾಲದ ಬೇಡಿಕೆ ಈಡೇರಲಿದೆ.