ಶಿರೂರು ದುರಂತದಲ್ಲಿ ಮೃತಪಟ್ಟ ಅರ್ಜುನ್‌ರ ಪಾರ್ಥಿವ ಶರೀರಕ್ಕೆ ಕಾಸರಗೋಡಿನಲ್ಲಿ ಅಂತಿಮ ನಮನ
ಕಾಸರಗೋಡು: ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿ ಕರ್ನಾಟಕದ ಶಿರೂರಿನ ಗಂಗಾವಲಿ ನದಿಯ ನೀರಿನ ಸೆಳೆತಕ್ಕೆ ಟಿಪ್ಪರ್ ಲಾರಿ ಕೊಚ್ಚಿಕೊಂಡು ಹೋಗಿ ಪ್ರಾಣ ಕಳೆದುಕೊಂಡ ಚಾಲಕ ಕಲ್ಲಿಕೋಟೆ ಕಣ್ಣಾಡಿಕಲ್ ನಿವಾಸಿ ಅರ್ಜುನ್‌ರ ಪಾರ್ಥಿವ ಶರೀರಕ್ಕೆ ಇಂದು ಮುಂಜಾನೆ ಕಾಸರಗೋಡಿನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.
ದುರಂತ ಸಂಭವಿಸಿ 72 ದಿನಗಳ ಬಳಿಕ ಅದೇ ನದಿಯಲ್ಲಿ ಪತ್ತೆಯಾದ ಅರ್ಜುನ್‌ರ ಮೃತದೇಹವನ್ನು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮರಣೋತ್ತರ ಪರೀಕ್ಷೆ ಹಾಗೂ ಡಿಎನ್‌ಎ ಪರೀಕ್ಷೆಗೊಳಪಡಿಸಿದ ನಂತರ ಆಂಬುಲೆನ್ಸ್‌ನಲ್ಲಿ ಕಾಸರಗೋಡಿನ ಮೂಲಕ ಕಲ್ಲಿಕೋಟೆಗೆ ಸಾಗಿಸಲಾಯಿತು. ಆಂಬುಲೆನ್ಸ್ ಇಂದು ಮುಂಜಾನೆ 2.30ಕ್ಕೆ ಕಾಸರಗೋಡು ಬಸ್ ನಿಲ್ದಾಣ ಸಮೀಪ ತಲುಪಿದಾಗ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ಭಾರೀ ಸಂಖ್ಯೆಯಲ್ಲಿ ಜನರು ಅಲ್ಲಿ ನೆರೆದಿದ್ದರು. ಜಿಲ್ಲಾಧಿ ಕಾರಿ ಕೆ. ಇಂಭಶೇಖರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಿ. ಶಿಲ್ಪಾ ಅವರು ಅರ್ಜುನ್‌ರ ಮೃತದೇಹಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ಅಲ್ಲಿ ನೆರೆದ ಜನಸಮೂಹವೂ ಅಂತಿಮ ನಮನ ಸಲ್ಲಿಸಿತು. ಮೃತದೇಹವನ್ನು ಕಾರವಾರದಿಂದ ಕಲ್ಲಿಕೋಟೆಗೆ ಸಾಗಿಸುವ ಆಂಬುಲೆನ್ಸ್‌ನ ಜೊತೆಗೆ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮತ್ತು ಕಾರವಾರ ಶಾಸಕ ಸತೀಶ್‌ಕೃಷ್ಣ ಸೆಯಿಲ್ ಕಾರಿನಲ್ಲಿ ಆಗಮಿಸಿದರು. ಮೃತದೇಹವನ್ನು ಕಲ್ಲಿಕೋಟೆಯ ಕಣ್ಣಾಡಿಕ್ಕಲ್‌ಗೆ ಇಂದು ಬೆಳಿಗ್ಗೆ ತಲುಪಿಸಿದಾಗ ಅಲ್ಲಿ ಭಾರೀ ಜನಸ್ತೋಮವೇ ನೆರೆದಿತ್ತು. ಕಂದಾಯ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು, ಕಾರ್ಯಕರ್ತರು, ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳ ಗಣ್ಯರೂ ಶ್ರದ್ಧಾಂಜಲಿ ಸಲ್ಲಿಸಿದರು.
ಅರ್ಜುನ್‌ರ ಮೃತದೇಹವನ್ನು ಇಂದು ಸರಕಾರಿ ಗೌರವಗಳೊಂದಿಗೆ ಹುಟ್ಟೂರಲ್ಲೇ ಸಂಸ್ಕರಿಸಲಾಗುವುದು.