ಸಂತಡ್ಕ ಶ್ರೀ ಅರಸುಸಂಕಲ ದೈವಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾಪ್ತಿ: ನಾಳೆಯಿಂದ ವಾರ್ಷಿಕ ಉತ್ಸವ ; ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ತಾಯಿಯ ಪಾತ್ರ ಮಹತ್ತರ-ಸಾಧ್ವಿ ಶ್ರೀಮಾತಾನಂದಮಯಿ
ಮೀಯಪದವು: ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ತಾಯಿಯ ಪಾತ್ರ ಮಹತ್ತರವಾಗಿದೆ. ತಾಯಿಯಲ್ಲಿರುವ ಎಲ್ಲಾ ಗುಣ ನಡತೆ ಮಕ್ಕಳಲ್ಲಿ ಸಂಸ್ಕಾರ ಮೂಡಿಸಲು ಸಾಧ್ಯವಿದೆಯೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಮಾತಾನಂದಮಯಿ ನುಡಿದರು. ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರದಲ್ಲಿ ನಡೆಯುತ್ತಿರುವ ಮಾಡದ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ನಡೆದ ಮಾತೃಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಓರ್ವೆ ಹೆಣ್ಣು ಛಲ ತೊಟ್ಟರೆ ಏನೂ ಬೇಕಾದರೂ ಸಾಧಿಸಬಹುದಾಗಿದ್ದು, ತಾಯಿ ಎಂದರೆ ಪಾವಿತ್ರ್ಯಳು, ಅವರಲ್ಲಿ ಸಂಸ್ಕಾರ, ಆಧ್ಯಾತ್ಮಿಕ, ಚಿಂತನೆ ಮನೆ ಮಾಡಿದೆ ಎಂದರು. ಪಾರ್ವತಿ ಶ್ರೀಧರ ಭಟ್ ಮಾವೆ ಅಧ್ಯಕ್ಷತೆ ವಹಿಸಿದರು. ಡಾ. ಶಾರದಾ ಉದಯಕುಮಾರ್, ಜಯಲಕ್ಷ್ಮಿ ಕಾರಂತ್, ಮೀರಾ ಆಳ್ವ, ಯಮುನ ಎ. ಕುಂಬಳೆ, ಮೀನಾಕ್ಷಿ ಸಿ.ಕೆ. ಚಿಪ್ಪಾರು, ರತ್ನಾವತಿ ಎಸ್. ಭಂಡಾರಿ, ಆಶಾಲತ ಶುಭಾಶಂಸನೆ ಗೈದರು. ಇದೇ ವೇಳೆ ಪ್ರಸಾದ ವಿತರಣೆಗೆ ಕೈ ಚೀಲ ವ್ಯವಸ್ಥೆ ಸೇವಾ ರೂಪದಲ್ಲಿ ಮಾಡಿದ ದೀಪ್ತಿ ದೀಪಕ್ ಶೆಟ್ಟಿ ಪರವಾಗಿ ಸಂಬಂಧಿಕೆ ವಿಮಲ ವಿ. ಶೆಟ್ಟಿ ಇವರನ್ನು ಸಾಧ್ವಿ ಗೌರವಿಸಿದರು. ಅದ್ವಿತಾ ಸಂತಡ್ಕ ಪ್ರಾರ್ಥಿಸಿದರು. ಆಶಾಲತ ಸ್ವಾಗತಿಸಿ, ಯಶ್ವಿತ ಉದಯಶೆಟ್ಟಿ, ಅಕ್ಷತ ಅಶೋಕ ಶೆಟ್ಟಿ ನಿರೂಪಿಸಿದರು. ಅರ್ಪಿತ ರೈ ಸಂತಡ್ಕ ವಂದಿಸಿದರು.
ಶ್ರೀ ಅರಸು ಸಂಕಲ, ಶ್ರೀ ಧೂಮಾವತಿ ಬಂಟ, ಶ್ರೀ ವ್ಯಾಘ್ರ ಚಾಮುಂಡಿ, ಕೊರತಿ ಗುಳಿಗ ದೈವಗಳ ಪುನರ್‌ಪ್ರತಿಷ್ಠೆ, ಕಲಶಾಭಿಷೇಕ ಇಂದು ಬೆಳಿಗ್ಗೆ ಸಮಾಪ್ತಿಗೊಂಡಿತು. ನಾಳೆಯಿಂದ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಆರಂಭಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ನಿನ್ನೆ ಸುಣ್ಣಾರಬೀಡು ಶ್ರೀ ಆದಿಶಕ್ತಿ ಗೋಪಾಲಕೃಷ್ಣ ಕ್ಷೇತ್ರದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಂಡಿತು. ಸುಣ್ಣಾರಬೀಡು ಕುಟುಂಬದವರು, ಬರೆಡ್ಕ ಭಂಡಾರ ಮನೆಯವರು ಭಾಗವಹಿಸಿದರು. ಚಿಗುರುಪಾದೆಯಿಂದ ಹಲವು ದೇವಸ್ಥಾನ, ದೈವಕ್ಷೇತ್ರ ಮತ್ತು ಸಂಘ ಸಂಸ್ಥೆಗಳ ವತಿಯಿಂದ ಹೊರೆಕಾಣಿಕೆ ಮೆರವಣಿಗೆ ಬಾಳಿಯೂರು ಶ್ರೀ ಅಯ್ಯಪ್ಪ ಮಂದಿರದ ಮೂಲಕ ಸಾಗಿತು. ಹೊರೆಕಾಣಿಕೆ ಮೆರವಣಿಗೆ ಯನ್ನು ಅರಸು ಸಂಕಲ ದೈವಕ್ಷೇತ್ರದ ಆಡಳಿತ ಸಮಿತಿಯವರು ಸ್ವಾಗತಿಸಿದರು.