ಸಂತ್ರಸ್ತರಿಗೆ ಸಹಾಯ ಮಾಡಲು ಸಂಗ್ರಹಿಸಿದ ಆಹಾರ ಧಾನ್ಯ ಕಿಟ್‌ಗಳ ಮಾರಾಟ ಆರೋಪ ಆಧಾರ ರಹಿತವೆಂದು ಮಂಗಲ್ಪಾಡಿ ಪಂ.ಆಡಳಿತ ಸಮಿತಿ
ಕಾಸರಗೋಡು: ವಯನಾಡಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಸಹಾಯ ಮಾಡಲು ಮಂಗಲ್ಪಾಡಿ ಪಂಚಾಯತ್ ಸಂಗ್ರಹಿಸಿದ ಆಹಾರ ಧಾನ್ಯಗಳ ಕಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ಮೂಡಿ ಬಂದ ಆರೋಪ ಆಧಾರರಹಿತವೆಂದು ಪಂಚಾಯತ್ ಆಡಳಿತ ಸಮಿತಿ ಪದಾ ಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದುರಂತ ಸಂಭವಿಸಿದ ಪ್ರದೇಶಗಳಿಗೆ ನವೆಂಬರ್ ೨೪ರಂದು ತೆರಳಿದ್ದ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಮಜೀದ್ ಪಚ್ಚಂಬಳ ನೇತೃತ್ವದಲ್ಲಿ ಜನರಿಂದ ಸಂಗ್ರಹಿಸಿದ ಆಹಾರ ಧಾನ್ಯಗಳು, ಬಟ್ಟೆಬರೆಗಳು, ಅಗತ್ಯ ವಸ್ತುಗಳನ್ನು ವಯನಾಡಿಗೆ ತಲುಪಿಸಿ ಮೇಪಾಡಿ ಪಂಚಾಯತ್ ಅಧ್ಯಕ್ಷ ಕೆ. ಬಾಬುರವರಿಗೆ ಹಸ್ತಾಂತರಿಸಿರುವುದಾಗಿ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನಾ ನೌಫಲ್, ಉಪಾಧ್ಯಕ್ಷ ಯೂಸಫ್ ಹೇರೂರು, ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಮಜೀದ್ ಪಚ್ಚಂಬಳ ಎಂಬಿವರು ಸುದ್ಧಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ವಾಸ್ತವ ಇದಾಗಿರುವಾಗ ಸಂತ್ರಸ್ತರ ಹೆಸರಲ್ಲಿ ಸಂಗ್ರಹಿಸಿದ ಸಾಮಗ್ರಿಗಳನ್ನು ಮಾರಾಟ ಮಾಡಿ ಹಣ ಮಾಡಲಾಗಿದೆ ಎಂಬ ಆರೋಪವನ್ನು ಹೊರಿಸುತ್ತಿರುವುದು ಪಂಚಾಯತ್ ಆಡಳಿತ ಸಮಿತಿ ಸದಸ್ಯರನ್ನು ತೇಜೋವಧೆ ಮಾಡಲಿರುವ ಗೂಢ ತಂತ್ರದ ಭಾಗವಾಗಿದೆ ಎಂದು ಅವರು ಹೇಳಿದರು.