ಸಚಿವ ಸಂಪುಟ ಪುನಾರಚನೆ ತೀರ್ಮಾನ ೨೪ರಂದು: ಗಣೇಶ್ ಕುಮಾರ್, ಕಡನ್ನಪಳ್ಳಿ ಸಚಿವ ಸಂಪುಟಕ್ಕೆ
ತಿರುವನಂತಪುರ: ಎಡರಂಗದ ರಾಜ್ಯ ಸಮಿತಿ ಸಭೆ ಈತಿಂಗಳ ೨೪ರಂದು ಕರೆಯಲು ತೀರ್ಮಾನಿಸಲಾಗಿದ್ದು, ಅದರಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚಿಸುವ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಇದರಂತೆ ಜನಾಧಿಪತ್ಯ ಕೇರಳ ಕಾಂಗ್ರೆಸ್‌ನ ಆಂಟನಿರಾಜು ಮತ್ತು ಐಎನ್‌ಎಲ್‌ನ ಅಹಮ್ಮದ್ ದೇವರ್‌ಕೋವಿಲ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಅವರ ಪರ‍್ಯಾಯವಾಗಿ ಕೇರಳ ಕಾಂಗ್ರೆಸ್ (ಬಿ) ಶಾಸಕ ಕೆ.ಬಿ. ಗಣೇಶ್ ಕುಮಾರ್ ಮತ್ತು ಕಾಂಗ್ರೆಸ್ (ಎಸ್) ಶಾಸಕ ಕಡನ್ನಪಳ್ಳಿ ರಾಮಚಂದ್ರನ್ ಅವರು ಹೊಸ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸಚಿವ ಆಂಟನಿ ರಾಜು ಈಗ ಹೊಂದಿರುವ ಸಾರಿಗೆ ಖಾತೆಯನ್ನು ಕೆ.ಬಿ. ಗಣೇಶ್ ಕುಮಾರ್‌ರಿಗೂ, ಸಚಿವ ಅಹಮ್ಮದ್ ದೇವರ್ ಕೋವಿಲ್ ಹೊಂದಿರುವ ಬಂದರು ಮತ್ತು ಪ್ರಾಚ್ಯವಸ್ತು ಖಾತೆಯನ್ನು ಕಡನ್ನಪಳ್ಳಿ ರಾಮಚಂದ್ರನ್‌ರಿಗೆ ವಹಿಸಿಕೊಡುವ ಸಾಧ್ಯತೆಯಿದೆ.
ಮುಖ್ಯಮಂತ್ರಿಯ ನೇತೃತ್ವದಲ್ಲಿ ನಡೆಯುತ್ತಿರುವ ನವಕೇರಳ ಸಭೆ ಪರ‍್ಯಟನೆ ಈ ತಿಂಗಳ ೨೩ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳಳಿದೆ. ಮರುದಿನ ಬೆಳಿಗ್ಗೆ ಎಡರಂಗ ರಾಜ್ಯ ಸಮಿತಿ ಸಭೆ ನಡೆಯಲಿದ್ದು, ಅದರಲ್ಲಿ ಸಚಿವ ಸಂಪುಟ ಪುನಾರಚನೆಯ ಕುರಿತಾದ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು.
ಎಡರಂಗದಲ್ಲಿ ಈ ಹಿಂದೆ ಕೈಗೊಳ್ಳಲಾದ ತೀರ್ಮಾನ ಪ್ರಕಾರ ಆಂಟನಿರಾಜು ಮತ್ತು ಅಹಮ್ಮದ್ ದೇವರ್‌ಕೋವಿಲ್ ಮೊದಲ ಎರಡೂವರೆ ವರ್ಷ, ನಂತರದ ಎರಡೂವರೆ ವರ್ಷ ಕೆ.ಬಿ. ಗಣೇಶ್ ಕುಮಾರ್ ಮತ್ತು ಕಡನ್ನಪ್ಪಳ್ಳಿ ರಾಮಚಂದ್ರನ್ ಅವರು ಸಮಾನವಾಗಿ ಸಚಿವ ಸ್ಥಾನವನ್ನು ಹಂಚಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದನ್ನು ಪಾಲಿಸುವ ತೀರ್ಮಾನ ಎಡರಂಗ ಈಗ ಕೈಗೊಂಡಿದೆ.
ಇದರಂತೆ ಡಿಸೆಂಬರ್ ೨೩ ಅಥವಾ ೨೪ರಂದು ಗಣೇಶ್ ಕುಮಾರ್ ಮತ್ತು ಕಡನ್ನಪ್ಪಳ್ಳಿ ಹೊಸ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಅಥವಾ ರಾಜ್ಯಪಾಲರ ಸೌಕ ರ್ಯಕ್ಕೆ ಹೊಂದಿಕೊಂಡು ಇದು ನಡೆಯಲಿದೆ.