ಸರ್ವೀಸ್ ರಸ್ತೆಯಲ್ಲಿ ಸಿಲುಕಿಕೊಂಡ ವಿಮಾನದ ಬಿಡಿಭಾಗವನ್ನು ಹೇರಿಕೊಂಡು ಸಾಗುತ್ತಿದ್ದ ಕಂಟೈನರ್ ಲಾರಿ
ಉಪ್ಪಳ: ವಿಮಾನದ ಬಿಡಿಭಾಗಗಳನ್ನು ತುಂಬಿಸಿಕೊಂಡು ಬಂದ ಕಂಟೈನರ್ ಲಾರಿ ಸರ್ವೀಸ್ ರಸ್ತೆಯಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಸಂಚಾರ ಮೊಟಕುಗೊಂಡಿದ್ದು, ಇಂದು ಬೆಳಿಗ್ಗೆ ಕಂಟೈನರ್ ಲಾರಿಯನ್ನು ತೆರವುಗೊಳಿಸಲಾಗಿದೆ.
ಮಂಗಳೂರು ಭಾಗದಿಂದ ಏಳಿಮಲ ಸೈನಿಕ ಅಕಾಡೆಮಿಗೆ ತೆರಳುತ್ತಿದ್ದ ಕಂಟೈನರ್ ಲಾರಿ ಶಿರಿಯಾಮುಟ್ಟಂ ಸರ್ವೀಸ್ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಇದರಿಂದಾಗಿ ಈ ಭಾಗದಲ್ಲಿ ರಸ್ತೆ ತಡೆ ಸೃಷ್ಟಿಯಾಯಿತು. ಹೆದ್ದಾರಿ ಅಧಿಕಾರಿಗಳು ತಲುಪಿ ಹೆದ್ದಾರಿಯಲ್ಲಿ ವಾಹನಗಳನ್ನು ಸಂಚರಿಸಲು ವ್ಯವಸ್ಥೆ ಮಾಡಿದರು. ೪೦ಕ್ಕೂ ಅಧಿಕ ಚಕ್ರಗಳಿರುವ ಕಂಟೈನರ್ ಲಾರಿಯಲ್ಲಿ ವಿಮಾನದ ಬಿಡಿಭಾಗವನ್ನು ಸಾಗಿಸಲಾಗುತ್ತಿತ್ತು. ಲಾರಿ ರಸ್ತೆಯಲ್ಲಿ ಬಾಕಿಯಾದ ಬಳಿಕ ಇದರಲ್ಲಿದ್ದ ಸುಪರ್‌ವೈಸರ್ ಇಳಿದು ತೆರಳಿದ್ದು, ಡ್ರೈವರ್ ಮತ್ತು ಕ್ಲೀನರ್ ಮಾತ್ರವೇ ಇದರಲ್ಲಿದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ ಸರ್ವೀಸ್ ರಸ್ತೆಯಲ್ಲಿದ್ದ ಮಣ್ಣನ್ನು ತೆರವುಗೊಳಿಸಿ ಲಾರಿಗೆ ಮುಂದಕ್ಕೆ ಚಲಿಸಲು ವ್ಯವಸ್ಥೆ ಮಾಡಲಾಗಿದ್ದು, ಸಮತಟ್ಟಾದ ಪ್ರದೇಶದಲ್ಲಿ ಈಗ ಇದನ್ನು ನಿಲುಗಡೆಗೊಳಿಸಲಾಗಿದೆ.