ಸಾಮಗ್ರಿಗಳ ಮರೆಯಲ್ಲಿ ಎಂಡಿಎಂಎ ಸಾಗಾಟ: ಬೈಕ್ ಸಹಿತ ಇಬ್ಬರ ಸೆರೆ
ಕಾಸರಗೋಡು: ಪಾರ್ಸೆಲ್ ಸಾಮಗ್ರಿಗಳ ಮರೆಯಲ್ಲಿ ಸಾಗಿಸುತ್ತಿದ್ದ ಮಾರಕ ಮಾದಕ ದ್ರವ್ಯವಾದ ಎಂಡಿಎಂಎಯನ್ನು ಕಾಸರಗೋಡು ಎಕ್ಸೈಸ್ ಎನ್ಫೋರ್ಸ್ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಕೂಡ್ಲು ಗ್ರಾಮದ ನೀರ್ಚಾಲ್ನ ಅಮಾನ್ ಸಜಾದ್ (೨೦) ಮತ್ತು ಕಾಸರಗೋಡು ಅಡ್ಕತ್ತಬೈಲ್ನ ಅಮೀರ್ ಕೆ.ಎಂ.(೩೪) ಎಂಬವರನ್ನು ಬಂಧಿಸಿ ಅವರ ವಿರುದ್ಧ ಎನ್ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಇವರು ಸಂಚರಿಸುತ್ತಿದ್ದ ಬೈಕನ್ನೂ ಅಬಕಾರಿ ತಂಡ ವಶಪಡಿಸಿಕೊಂಡಿದೆ.
ಸ್ಪೆಷಲ್ ಸ್ಕ್ವಾಡ್ನ ಎಕ್ಸೈಸ್ ಇನ್ಸ್ಪೆಕ್ಟರ್ ರಾಧಾಕೃಷ್ಣನ್ ಪಿ.ಜಿ.ರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ.ವಿ., ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ನೌಷಾದ್ ಕೆ, ಪ್ರಜೀತ್ ಕೆ.ಆರ್, ನಸರುದ್ದೀನ್ ಎ.ಕೆ., ಸೋನು ಸೆಬಾಸ್ಟಿನ್, ಚಾಲಕ ಕ್ರಿಸ್ಟಿ ಪಿ.ಎ. ಎಂಬವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಪಾರ್ಸಲ್ ಮರೆಯಲ್ಲಿ ಬೆಂಗಳೂರು ಮತ್ತು ಇತರೆಡೆಗಳಿಂದ ಕಾಸರಗೋಡಿಗೆ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯ ಸಾಗಿಸುವ ಬಗ್ಗೆ ಅಬಕಾರಿ ತಂಡಕ್ಕೆ ಸ್ಪಷ್ಟ ಮಾಹಿತಿ ಲಭಿಸಿದೆ. ಅದರ ಜಾಡು ಹಿಡಿದು ಹೊಸವರ್ಷ ದಿನವಾದ ನಿನ್ನೆ ಹೊಸ ಬಸ್ ನಿಲ್ದಾಣದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಈ ಇಬ್ಬರನ್ನು ಬಂಧಿಸಿ, ಅವರ ಕೈವಶವಿದ್ದ ೧೨.೫೩ ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸ ಲಾಗಿದೆ. ಬಂಧಿತ ಆರೋಪಿಗಳನ್ನು ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.