ಸಾಮಾಜಿಕ ಕಲ್ಯಾಣ ಪಿಂಚಣಿ ಲಪಟಾವಣೆ: 373 ಸಿಬ್ಬಂದಿಗಳ ಹೆಸರು ಬಹಿರಂಗಪಡಿಸಿದ ಆರೋಗ್ಯ ಇಲಾಖೆ

ತಿರುವನಂತಪುರ: ಬಡ ಕುಟುಂಬದವರಲ್ಲಿ 60ಕ್ಕಿಂತ ಮೇಲ್ಪಟ್ಟ ವಯೋಮಿತಿಯ ಹಿರಿಯ ನಾಗರಿಕರಿಗೆ ವಿತರಿಸಲಾಗುವ ಸಾಮಾಜಿಕ ಕಲ್ಯಾಣ ಪಿಂಚಣಿಯನ್ನು ಅನರ್ಹವಾಗಿ ಪಡೆದು ಅದನ್ನು ಲಪಟಾಯಿಸಿದ ಆರೋಗ್ಯ ಇಲಾಖೆಯ 373 ಸಿಬ್ಬಂದಿಗಳ ಹೆಸರನ್ನು ಇಲಾಖೆ ಬಹಿರಂಗಪಡಿಸಿದೆ. ಇವರು ಆರೋಗ್ಯ ಇಲಾಖೆಯ ವಿವಿಧ ಸ್ತರಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಾಗಿದ್ದಾರೆ. ಹೀಗೆ ಅವರು  ಲಪಟಾಯಿಸಿದ ಕಲ್ಯಾಣ ಪಿಂಚಣಿಯನ್ನು ಶೇ. 18ರಷ್ಟು ಬಡ್ಡಿದರದೊಂದಿಗೆ ಅವರಿಂದ ಮರು ವಸೂಲಿ ಮಾಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಮಾತ್ರವಲ್ಲ ಅವರ ವಿರುದ್ಧ ಇಲಾಖಾ ಮಟ್ಟದಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಈ ಬಗ್ಗೆ ಹೊರಡಿಸಿದ ಆದೇಶದಲ್ಲಿ ನಿರ್ದೇಶ ನೀಡಿದ್ದಾರೆ. ಇದರಂತೆ ಈ ಸಿಬ್ಬಂದಿಗಳನ್ನು ಸದ್ಯ ಸರಕಾರಿ ಸೇವೆಯಿಂದ ಅಮಾನತುಗೊಳಿಸುವ ಸಾಧ್ಯತೆ ಇದೆ.

ಸಾಮಾಜಿಕ ಕಲ್ಯಾಣ ಪಿಂಚಣಿಯನ್ನು ಅನಧಿಕೃತವಾಗಿ  ಪಡೆದವರ ಸರಕಾರಿ ಸಿಬ್ಬಂದಿಗಳ ಪೈಕಿ ಅತೀ ಹೆಚ್ಚು ಮಂದಿ ಆರೋಗ್ಯ ಇಲಾಖೆಗೆ ಸೇರಿದವರಾಗಿದ್ದಾರೆ ಎಂಬುದನ್ನು ತನಿಖೆಯಲ್ಲಿ ಪತ್ತೆಹಚ್ಚ ಲಾಗಿದೆ. ಹೀಗೆ ವಿವಿಧ ಇಲಾಖೆಗಳ  1400 ಮಂದಿ ಸರಕಾರಿ ನೌಕರರು ಅನಧಿ ಕೃತವಾಗಿ ಕಲ್ಯಾಣ ಪಿಂಚಣಿ ಪಡೆದಿರು ವುದನ್ನು ರಾಜ್ಯ ಹಣಕಾಸು ಇಲಾಖೆ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಈ ರೀತಿ  ಅನಧಿಕೃತವಾಗಿ ಈ ಪಿಂಚಣಿ ಪಡೆದವರ ಪೈಕಿ ಮಣ್ಣು ಸಂರಕ್ಷಣಾ ಇಲಾಖೆಯ ಆರು ಮಂದಿ ಸಿಬ್ಬಂದಿಗಳನ್ನು ಈಗಾಗಲೇ ಸರಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದರಲ್ಲಿ ಕಾಸರಗೋಡು ಜಿಲ್ಲೆಯ ಓರ್ವ ಸಿಬ್ಬಂದಿಯೂ ಒಳಗೊಂಡಿದ್ದಾರೆ.

ಇನ್ನು ಇದೇ ರೀತಿ ಅನಧಿಕೃತವಾಗಿ ಕಲ್ಯಾಣ ಪಿಂಚಣಿ ಪಡೆದ ಇತರ ಇಲಾಖೆಗಳ ಸಿಬ್ಬಂದಿಗಳ ಯಾದಿಯನ್ನು ಶೀಘ್ರ ಬಹಿರಂಗಪಡಿಸಿ ಅವರ ವಿರುದ್ಧವೂ ಶಿಕ್ಷಾ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳು ಮುಂದಾಗಿದೆ. ಅನರ್ಹವಾಗಿ ಕಲ್ಯಾಣ ಪಿಂಚಣಿ ಪಡೆದ ಸಿಬ್ಬಂದಿಗಳನ್ನು ಸಂರಕ್ಷಿಸುವ ಯತ್ನವನ್ನು ಕೆಲವರು ನಡೆಸುತ್ತಿದ್ದಾರೆಂಬ ರೀತಿಯ ಮಾಹಿತಿಗಳು ಹಣಕಾಸು ಇಲಾಖೆಗೆ ಲಭಿಸಿದ್ದು, ಅಂತಹವರ ವಿರುದ್ಧವೂ ಕ್ರಮಕ್ಕೆ ಇಲಾಖೆ ಮುಂದಾಗಿದೆ.

Leave a Reply

Your email address will not be published. Required fields are marked *

You cannot copy content of this page