ಸಾರಿಗೆ ಸಚಿವರ ಹೇಳಿಕೆ ವಿರುದ್ಧ ಬಸ್ ಮಾಲಕರು ರಂಗಕ್ಕೆ
ಕಾಸರಗೋಡು: ಖಾಸಗಿ ಬಸ್ಗಳು ಅಪಘಾತಕ್ಕೀಡಾದರೆ ಅದರ ಪರ್ಮಿಟ್ನ್ನು ಅಮಾನತು ಗೊಳಿಸಲಾಗುವುದೆಂಬ ಸಾರಿಗೆ ಖಾತೆ ಸಚಿವ ಕೆ.ಬಿ. ಗಣೇಶ್ ಕುಮಾರ್ರ ಹೇಳಿಕೆಯನ್ನು ಪ್ರತಿಭಟಿಸಿ ಖಾಸಗಿ ಬಸ್ ಮಾಲಕರು ರಂಗಕ್ಕಿಳಿದಿದ್ದಾರೆ.
ಸಚಿವರ ಇಂತಹ ಹೇಳಿಕೆ ಖಾಸಗಿ ಬಸ್ ವಲಯವನ್ನು ಪತನದತ್ತ ಸಾಗಿಸುವಂತೆ ಮಾಡುವ ಗುರಿ ಹೊಂದಿದೆ. ಇತ್ತೀಚೆಗೆ ರಾಜ್ಯದಾದ್ಯಂತವಾಗಿ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು ಇಪ್ಪತ್ತರಷ್ಟು ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ ಖಾಸಗಿ ಬಸ್ಗಳು ಒಳ ಗೊಂಡಿಲ್ಲ. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದಾಗಿ ರಸ್ತೆ ಎಂಬ ಹೆಸರಲ್ಲಿ ಅವೈಜ್ಞಾನಿಕವಾದ ರೀತಿಯಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸ ಲಾಗುತ್ತಿದೆ. ಅದರ ನಿರ್ಮಾಣ ಕೆಲಸವೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಜ್ಯಾರಿಯಲ್ಲಿ ರಸ್ತೆಗಳೇ ಇಲ್ಲದ ಸ್ಥಿತಿ ಉಂಟಾಗಿದೆಯೆಂದು ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಸ್ ಮಾಲಕರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್, ಕಾರ್ಯದರ್ಶಿ ಡಿ. ಲಕ್ಷ್ಮಣನ್ ಮೊದಲಾದವರು ತಿಳಿಸಿದರು.
ಸರಿಯಾದ ರಸ್ತೆಗಳ ಕೊರತೆಯೇ ಅಪಘಾತಗಳಿಗೆ ಪ್ರಧಾನ ಕಾರಣವಾಗಿದೆ. ಇಷ್ಟೊಂದು ತ್ಯಾಗಗಳನ್ನು ಸಹಿಸಿಕೊಂಡು ಸೇವೆ ನಡೆಸುವ ಖಾಸಗಿ ಬಸ್ಗಳು ಅಪಘಾತಕ್ಕೀಡಾಗಿ ಅದರಲ್ಲಿ ಯಾರಾದರೂ ಸಾವನ್ನಪ್ಪಿದಲ್ಲಿ ಅಂತಹ ಬಸ್ಗಳ ಪರ್ಮಿಟ್ ಅಮಾನತು ಗೊಳಿಸಲಾಗುವುದೆಂಬ ರೀತಿಯ ಸಾರಿಗೆ ಸಚಿವರ ಹೇಳಿಕೆ ಪ್ರತಿಭಟನಾರ್ಹವಾದುದಾಗಿದೆಯೆಂದೂ ಬಸ್ ಮಾಲಕ ಸಂಘಟನೆಯ ನೇತಾರರು ಹೇಳಿದರು. ಸಂಘಟನೆಯ ಇತರ ಪದಾಧಿಕಾರಿಗಳಾದ ಸಿ.ಎನ್. ಮೊಹಮ್ಮದ್ ಕುಂಞಿ, ರಾಜೇಶ್, ಶಂಕರ ನಾಯ್ಕ, ಸಿ.ಎ. ಪದ್ಮನಾಭನ್, ಪಿ.ಎ. ಮೊಹಮ್ಮದ್ ಕುಂಞಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.