ಸಿಡಿಲು ಬಡಿದು ತೆಂಗಿನ ಮರ, ಮನೆಗೆ ಹಾನಿ: ಮನೆಯವರು ಅಪಾಯದಿಂದ ಪಾರು
ಉಪ್ಪಳ: ಸಿಡಿಲು ಬಡಿದು ವಿವಿಧೆಡೆ ತೆಂಗಿನ ಮರಗಳು, ವಿದ್ಯುತ್ ಉಪಕರಣಗಳು ಹಾನಿಗೀಡಾಗಿದ್ದು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನಿನ್ನೆ ರಾತ್ರಿ ಸುಮಾರು ೮.೩೦ರ ವೇಳೆ ನಡೆದಿದೆ. ಅಂಬಾರು ಕೃಷ್ಣನಗರ ನಿವಾಸಿ ಮೊಹಮ್ಮದಲಿ ಎಂಬವರ ತೆಂಗಿನ ಮರಕ್ಕೆ ಸಿಡಿಲೆರಗಿದೆ. ಇದರಿಂದ ತೆಂಗಿನಮರ ಉರಿದಿದೆ. ಇದೇ ವೇಳೆ ಒಳಗಡೆಯಿದ್ದ ಪತ್ನಿ ನಜೀಮರ ಕೈಗೆ ಶಾಕ್ ತಗಲಿದ ಅನುಭವ ಉಂಟಾಗಿದ್ದು, ಕುಸಿದು ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ವಯರಿಂಗ್ ಹಾನಿಗೊಂಡಿದ್ದು, ಕಾಂಕ್ರೀಟ್ ಮನೆಯ ಎದುರು ಭಾಗದ ಗೋಡೆ ಬಿರುಕು ಬಿಟ್ಟಿರುವುದಾಗಿ ಮೊಹಮ್ಮದಾಲಿ ತಿಳಿಸಿದ್ದಾರೆ. ತೆಂಗಿನ ಮರಕ್ಕೆ ತಗಲಿದ ಬೆಂಕಿಯನ್ನು ಸ್ಥಳೀಯ ಯುವಕರು ನಂದಿಸಿದ್ದಾರೆ. ಕೃಷ್ಣನಗರ ನಿವಾಸಿ ಉಪ್ಪಳ ಬಸ್ ಏಜೆಂಟ್ ಸುಕುಮಾರರ ಮನೆಯ ಇನ್ವರ್ಟರ್ ಹಾಗೂ ಬಲ್ಬುಗಳು ಹಾನಿಗೀಡಾಗಿದೆ. ಈ ಪರಿಸರದಲ್ಲಿ ಹಲವು ದಾರಿ ದೀಪಗಳು ಹಾನಿಗೊಂಡಿದೆ. ಮುಟ್ಟಂ ಬೇರಿಕೆ ರಸ್ತೆ ಸಮೀಪದ ಜಾನಕಿ ಎಂಬವರ ಮನೆ ಬಳಿಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಉರಿದಿದೆ. ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.