ಸಿಡಿಲು ಬಡಿದು ಮನೆಗಳಿಗೆ ಹಾನಿ: ಒಬ್ಬರಿಗೆ ಗಾಯ; ವ್ಯಾಪಕ ನಾಶನಷ್ಟ
ಉಪ್ಪಳ/ ಕುಂಬಳೆ: ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ವೇಳೆ ಉಂಟಾದ ಸಿಡಿಲಿನ ಆಘಾತದಿಂದ ವಿವಿಧೆಡೆ ವ್ಯಾಪಕ ನಾಶನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ. ಎರಡು ಮನೆಗಳಿಗೆ ಹಾನಿ ಸಂಭವಿಸಿದ್ದು, ಓರ್ವೆ ಮಹಿಳೆ ಗಾಯಗೊಂಡಿದ್ದಾರೆ. ಮೀಂಜ ಪಂಚಾ ಯತ್ ವ್ಯಾಪ್ತಿಯ ಬುಡ್ರಿಯ ಎಂಬಲ್ಲಿ ಸೀನ ಎಂಬವರ ಮನೆಗೆ ಹಾನಿ ಯುಂಟಾಗಿದೆ. ಇವರ ಪತ್ನಿ ಸುಗಂಧಿಗೆ ಶಾಕ್ ತಗಲಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಸಿಡಿಲಿನ ಆಘಾತವುಂಟಾಗಿದೆ. ಕಾಂಕ್ರೀಟ್ ಮನೆಯ ವಿದ್ಯುತ್ ವಯ ರಿಂಗ್ ಸಹಿತ ವಿದ್ಯುತ್ ಉಪಕರಣಗಳು ಉರಿದು ನಾಶಗೊಂಡಿದೆ. ಘಟನೆ ವೇಳೆ ಮನೆಯವರು ಹೊರಗೆ ಓಡಿದುದರಿಂದ ಭಾರೀ ಅಪಾಯ ತಪ್ಪಿದೆ.
ಕುಂಬಳೆ ಬಳಿ ಆರಿಕ್ಕಾಡಿಯಲ್ಲೂ ಸಿಡಿಲಿನಾಘಾತದಿಂದ ಹಾನಿ ಉಂಟಾಗಿದೆ. ಆರಿಕ್ಕಾಡಿ ಕುಳಿಲ್ ಸಿಲ್ವರ್‌ನಗರದ ಗಲ್ಫ್ ಉದ್ಯೋಗಿ ಅಬ್ದುಲ್ ರಹ್ಮಾನ್ ಉಪ್ಪುಂಞಿ ಎಂಬವರ ಮನೆಗೆ ಹಾನಿಯುಂಟಾಗಿದೆ. ಗೋಡೆ ಹಾನಿಗೀಡಾಗಿದೆ. ಫ್ರಿಡ್ಜ್, ಇನ್‌ವರ್ಟರ್, ವಾಶಿಂಗ್ ಮೆಶಿನ್, ಟಿವಿ, ಎಸಿ ಹಾಗೂ ವಿದ್ಯುತ್ ವಯರಿಂಗ್ ಪೂರ್ಣವಾಗಿ ಉರಿದು ನಾಶಗೊಂಡಿದೆ. ಇದರಿಂದ ಭಾರೀ ನಷ್ಟ ಉಂಟಾಗಿದೆ ಎಂದು ದೂರಲಾಗಿದೆ. ಘಟನೆ ವೇಳೆ ಅಬ್ದುಲ್ ರಹ್ಮಾನ್‌ರ ಪತ್ನಿ ಸುಬೈದ ಹಾಗೂ ಮಗ ಸಿಯಾದ್ ಮನೆಯಲ್ಲಿದ್ದರು. ಅವರು ಹೊರಗೆ ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ.
ಪೆರ್ಲ: ನಿನ್ನೆ ಸಂಜೆ ಸಿಡಿಲಿನ ಆಘಾತಕ್ಕೆ ಪುತ್ತಿಗೆ ಪಂಚಾಯತ್‌ನ ದೇರಡ್ಕ ನೆಕ್ಕರೆಪದವುನಲ್ಲಿನ ಮನೆಯೊಂದರಲ್ಲಿ ಹಾನಿಯುಂಟಾಗಿದೆ. ಇಲ್ಲಿನ ವಿಜಯ ಕುಮಾರ್ ಎಂಬವರ ಮನೆಯ ವಿದ್ಯುತ್ ಮೈನ್‌ಸ್ವಿಚ್, ಮೀಟರ್, ವಯರಿಂಗ್‌ಗಳು ಹಾಗೂ ಗೃಹೋಪಯೋಗಿ ವಸ್ತುಗಳು ಹಾನಿಗೊಂಡಿರುವುದಾಗಿ ತಿಳಿದು ಬಂದಿದೆ.