ಸಿಡಿಲು ಬಡಿದು ಮನೆಗೆ ಹಾನಿ: ಭಾರೀ ಪ್ರಮಾಣದ ನಾಶನಷ್ಟ
ಪೈವಳಿಕೆ: ಸಿಡಿಲು ಬಡಿದು ಮನೆ ಬಿರುಕು ಬಿಟ್ಟು ವಿದ್ಯುತ್ ಉಪಕರಣಗಳು ಉರಿದು ನಾಶಗೊಂಡ ಘಟನೆ ಬಾಯಾರಿನಲ್ಲಿ ನಡೆದಿದೆ. ಬಾಯಾರು ಸಮೀಪದ ಧರ್ಮಡ್ಕ ಎಂಬಲ್ಲಿನ ರಬ್ಬರ್ ಕೃಷಿಕ ರೋಯಿ ಎಂಬವರ ಮನೆಗೆ ಮೊನ್ನೆ ರಾತ್ರಿ ಸಿಡಿಲು ಬಡಿದಿದೆ. ಇದರಿಂದ ಹೆಂಚು ಹಾಸಿದ ಮನೆಯ ಗೋಡೆ ಸುತ್ತು ಬಿರುಕು ಬಿಟ್ಟಿದೆ. ಮೈನ್ ಸ್ವಿಚ್ ಸಹಿತ ವಯರಿಂಗ್ ಪೂರ್ತಿ ಸಿಡಿದು ಚೆಲ್ಲಾಪಿಲ್ಲಿಗೊಂಡಿದೆ. ಈ ವೇಳೆ ರೋಯಿ, ಇವರ ಪತ್ನಿ, ಪುತ್ರಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಎರಡು ರಬ್ಬರ್ ಹಾಳೆ ಮಾಡುವ ಯಂತ್ರದ ಮೋಟಾರು, ಎರಡು ನೀರಿನ ಮೋಟಾರ್ ಪಂಪ್, ಫ್ರಿಜ್, ಟಿ.ವಿ ಸಹಿತ ವಿದ್ಯುತ್ ಉಪಕರಣಗಳು ಹಾನಿ ಗೀಡಾಗಿದ್ದು, ಸುಮಾರು 25ಲಕ್ಷ ರೂ.ಗಳ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಮನೆಗೆ ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಬಾಯಾರು ವಿಲೇಜ್ ಅಧಿಕಾರಿ, ಜನಪ್ರತಿನಿಧಿ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಸಹಿತ ಹಲವಾರು ಮಂದಿ ಭೇಟಿ ನೀಡಿದ್ದಾರೆ.