ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿ ಎಂ.ವಿ. ಗೋವಿಂದನ್ ಪುನರಾಯ್ಕೆ
ಕೊಲ್ಲಂ: ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿ ಎಂ.ವಿ. ಗೋವಿಂದನ್ ಪುನರಾಯ್ಕೆಗೊಂಡಿದ್ದಾರೆ. ಕೊಲ್ಲಂನಲ್ಲಿ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಎಂ.ವಿ. ಗೋವಿಂದನ್‌ರನ್ನೇ ಮತ್ತೆ ರಾಜ್ಯ ಕಾರ್ಯದರ್ಶಿಯನ್ನಾಗಿ ಮರು ಆರಿಸಲಾಗಿದೆ.
ಅನಾರೋಗ್ಯದ ನಿಮಿತ್ತ ಕೊಡಿಯೇರಿ ಬಾಲಕೃಷ್ಣನ್ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನವನ್ನು ಬಳಿಕ 2022ರಲ್ಲಿ ತೊರೆದಾಗ, ತೆರವುಗೊಂಡ ಆ ಸ್ಥಾನಕ್ಕೆ ಅಂದು ಸಚಿವರಾಗಿದ್ದ ಎಂ.ವಿ. ಗೋವಿಂದನ್‌ರನ್ನು ಆರಿಸಲಾಗಿತ್ತು. ಅದರಿಂದಾಗಿ 2022ರ ಆಗಸ್ಟ್ 28ರಂದು ಗೋವಿಂದನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೊಲ್ಲಂನಲ್ಲಿ ನಿನ್ನೆ ಸಮಾಪ್ತಿಗೊಂಡ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಗೋವಿಂದನ್‌ರನ್ನೇ ಕಾರ್ಯದರ್ಶಿ ಸ್ಥಾನಕ್ಕೆ ಮತ್ತೆ ಆರಿಸಲಾಗಿದೆ. ತನ್ನಿಂದ ಯಾವುದೇ ರೀತಿಯ ತಪ್ಪುಗಳು ಉಂಟಾಗಿದ್ದಲ್ಲಿ ಅದನ್ನು ತಿದ್ದಿ ಪಕ್ಷದ ಸೇವೆ ಮುಂದುವರಿಸುವೆನೆಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಿಗದಿತ ವಯೋಮಿತಿ ಮೀರಿದ ಹಿನ್ನೆಲೆಯಲ್ಲಿ ಮಾಜಿ ಸಚಿವೆ ಪಿ.ಕೆ. ಶ್ರೀಮತಿ ಟೀಚರ್, ಎ.ಕೆ. ಬಾಲನ್ ಮತ್ತು ಅನವೂರು ನಾಗಪ್ಪನ್ ಎಂಬವರನ್ನು ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯತನದಿಂದ ಹೊರತುಪಡಿಸಲಾಗಿದೆ. ಪಕ್ಷದ ಕೇಂದ್ರ ಸಮಿತಿ ಸದಸ್ಯೆ ಕೆ.ಕೆ. ಶೈಲಜ, ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಎರ್ನಾಕುಳಂ ಜಿಲ್ಲಾ ಕಾರ್ಯದರ್ಶಿ ಸಿ.ಎನ್. ಮೋಹನನ್‌ರನ್ನು ರಾಜ್ಯ ಸೆಕ್ರೆಟರಿಯೇಟ್ ಸದಸ್ಯರನ್ನಾಗಿ ಹೊಸದಾಗಿ ಸೇರ್ಪಡೆ ಗೊಳಿಸಲಾಗಿದೆ. ಇದರ ಹೊರತಾಗಿ ಆರೋಗ್ಯ ಹಾಗೂ ನಿಗದಿತ ವಯೋಮಿತಿ ಮೀರಿದ ಹೆಸರಲ್ಲಿ ರಾಜ್ಯ ಸಮಿತಿಯಿಂದ 14 ಸದಸ್ಯರನ್ನೂ ಹೊರತುಪಡಿಸಲಾಗಿದೆ. ಅದರ ಬದಲು ೧೭ ಮಂದಿಯನ್ನು ಹೊಸದಾಗಿ ರಾಜ್ಯ ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ.