ಸಿಪಿಎಂ ಹಿರಿಯ ನೇತಾರ ಎ.ಕೆ. ನಾರಾಯಣನ್ ನಿಧನ
ಕಾಸರಗೋಡು: ಸಿಪಿಎಂನ ಮಾಜಿ ಜಿಲ್ಲಾ ಕಾರ್ಯದರ್ಶಿ ಹೊಸದುರ್ಗ ಅಧಿಯಾಂಬೂರ್ ಬಳಿಯ ಕಾಲಿಕ್ಕಡವು ವೀಡ್‌ನ ಎ.ಕೆ. ನಾರಾಯಣನ್ (೮೫) ಅಸೌಖ್ಯದ ನಿಮಿತ್ತ ಹೊಸದುರ್ಗ ಸಹಕಾರಿ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ನಿಧನ ಹೊಂದಿದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯರೂ, ಸಿಐಟಿಯುನ ಮಾಜಿ ರಾಜ್ಯ ಉಪಾಧ್ಯಕ್ಷ ಹಾಗೂ ಕನ್ಸ್ಯೂಮರ್ ಫೆಡ್‌ನ ಹಾಲಿ ಅಧ್ಯಕ್ಷರೂ ಆಗಿದ್ದರು.
ಇವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಸಿಪಿಎಂನ ಹೊಸದುರ್ಗ ಏರಿಯಾ ಸಮಿತಿ ಕಚೇರಿಯಲ್ಲೂ, ಬಳಿಕ ಅಧಿಯಾಂಬೂರು ಬಾಲಬೋಧಿನಿ ವಾಚನಾಲಯದಲ್ಲಿ ಅಂತಿಮ ದರ್ಶನಕ್ಕಿರಿಸಲಾಯಿತು. ಸಿಪಿಎಂ ಹಾಗೂ ಇತರ ಹಲವು ಪಕ್ಷಗಳ ನೇತಾರರು, ಕಾರ್ಯಕರ್ತರು ಹಾಗೂ ಜನರೂ ಭಾರೀ ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ತಡೆದರು. ಬಳಿಕ ಮೃತದೇಹವನ್ನು ಅವರ ಮನೆಗೆ ತಲುಪಿಸಲಾಗುವುದು. ಇಂದು ಅಪರಾಹ್ನ ಹೊಸದುರ್ಗ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಬೀಡಿ ಕಾರ್ಮಿಕ ನೇತಾರರಾಗಿ ಕಾರ್ಮಿಕ ಸಂಘಟನೆ ಮೂಲಕ ಬೆಳೆದು ಬಂದ ಎ.ಕೆ. ನಾರಾಯಣನ್ ಅವರು ವಿವಿಧ ಕಾರ್ಮಿಕ ಹೋರಾಟಗಳಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ. ಮಾತ್ರವಲ್ಲ ತುರ್ತು ಪರಿಸ್ಥಿತಿ ವೇಳೆಯಲ್ಲೂ ಅವರು ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ೧೭ ತಿಂಗಳು ಜೈಲು ವಾಸವನ್ನು ಅನುಭವಿಸಿದ್ದರು. ಸಿಐಟಿಯುವಿನ ಕಾಸರಗೋಡು ಜಿಲ್ಲಾ ಸಮಿತಿಯ ಪ್ರಥಮ ಅಧ್ಯಕ್ಷ, ಬೀಡಿ ಕಾರ್ಮಿಕ ಫೆಡರೇಶನ್‌ನ ರಾಜ್ಯ ಅಧ್ಯಕ್ಷ, ಅಖಿಲ ಭಾರತ ಉಪಾಧ್ಯಕ್ಷ, ಕೋಟೆಚ್ಚೇರಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ೧೯೮೯ರಿಂದ ೧೯೯೪ರ ವರೆಗೆ, ೨೦೦೪ರಿಂದ ೨೦೦೮ರವರೆಗೆ ಸಿಪಿಎಂ ಜಿಲ್ಲಾ ಕಾರ್ಯ ದರ್ಶಿಯಾಗಿದ್ದರು.
ಮೃತರು ಪತ್ನಿ ಇಂದಿರಾ, ಮಕ್ಕಳಾದ ಲೈಲಾ, ಅನಿತ, ಆಶಾ, ಸೀಮಾ, ಅಳಿಯಂದಿರಾದ ಕೆ. ನಾರಾಯಣನ್, ಜಿ. ಯದುನಾಥ್, ಜೆ. ಜೈನೇಂದ್ರನ್, ಕೆ. ಅಶೋಕನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.