ಸಿಪಿಐ ಮುಂದಾಳು ಬೆಜ್ಜ ಎಂ. ನಾರಾಯಣ ಹೆಗ್ಡೆ ಸಂಸ್ಮರಣೆ
ಮಂಜೇಶ್ವರ: ಸಿಪಿಐಯ ಹಿರಿಯ ನೇತಾರ ಬೆಜ್ಜದ ಎಂ. ನಾರಾಯಣ ಹೆಗ್ಡೆ ಅವರ ೧೫ನೇ ಸಂಸ್ಮರಣಾ ವಾರ್ಷಿಕವನ್ನು ಇಂದು ಆಚರಿಸಲಾ ಯಿತು. ಬೆಜ್ಜದಲ್ಲಿರುವ ಅವರ ಸ್ವ-ಗೃಹದ ಸಮೀಪದ ಕುಟೀರದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು.
ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ ರಾಮಕೃಷ್ಣ ಕಡಂಬಾರ್ ಉದ್ಘಾಟಿಸಿದರು. ಅವರು ಮಾತನಾಡಿ ಎಂ. ನಾರಾಯಣ ಹೆಗ್ಡೆಯವರು ಬ್ರಿಟಿಷ್ ಸೇನೆಗೆ ಸ್ವಯಂ ರಾಜೀನಾಮೆ ನೀಡಿ ಬಡವರ, ರೈತರ ಕ್ಷೇಮಾಭಿ ವೃದ್ಧಿಗೆ ಪ್ರಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಬಡವರ ಹಾಗೂ ರೈತರ ಭೂಮಿ, ಸಹಿತ ಸೊತ್ತುಗಳನ್ನು ಜಮೀನುದಾರ ರಿಂದ ವಶಪಡಿಸಿ ಬಡವರ ಸ್ವಾಧೀನಕ್ಕೆ ನೀಡುವಲ್ಲಿ ಪ್ರಧಾನಪಾತ್ರ ವಹಿಸಿದ್ದಾರೆ. ಕಾಲ್ನಡಿಗೆಯಲ್ಲೇ ಬೆಜ್ಜದಿಂದ ಪೆರ್ಲ, ಅಡ್ಯನಡ್ಕ, ಪುತ್ತೂರು, ವರ್ಕಾಡಿ ಭಾಗಗಳಲ್ಲಿ ಸಂಚರಿಸಿ ಕಮ್ಯೂನಿಸ್ಟ್ ಪಕ್ಷದ ಚಳವಳಿಗೆ ನೇತೃತ್ವ ನೀಡಿದ್ದರು ಎಂದು ತಿಳಿದರು. ರಘುರಾಮ ಶೆಟ್ಟಿ ಧ್ವಜಾ ರೋಹಣ ನಡೆಸಿದರು. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಸಿಪಿಐ ಮೀಂಜ ಲೋಕಲ್ ಸೆಕ್ರೆಟರಿ ಗಂಗಾಧರ ಕೊಡ್ಡೆ ಮಾತನಾಡಿದರು. ಶರತ್ ಕುಮಾರ್ ಬೆಜ್ಜ ಸ್ವಾಗತಿಸಿ, ಕಿಶನ್ ಹೆಗ್ಡೆ ವಂದಿಸಿದರು.