ಸಿಮ್ಗಳನ್ನು ಕಳಚಿಟ್ಟು ಮನೆಯೊಡೆಯನ ಮೊಬೈಲ್ ದೋಚಿದ ಕಳ್ಳರು
ಕುಂಬಳೆ: ಮನೆಯ ಸಿಟೌಟ್ನಲ್ಲಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಫೋನ್ ಸಹಿತ ವಿವಿಧ ಸಾಮಗ್ರಿಗಳನ್ನು ಕಳ್ಳರು ದೋಚಿದ ಘಟನೆ ನಡೆದಿದೆ.
ಕೊಡ್ಯಮ್ಮೆ ಪೂಕಟ್ಟೆಯ ಅಬ್ದುಲ್ ರಹಮಾನ್ ಯಾನೆ ಅಂದ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ಈ ಕಳವು ನಡೆದಿದೆ. ಮೊಬೈಲ್ ಫೋನ್, ಸಿಟೌಟ್ನಲ್ಲಿರಿಸಿದ್ದು ಒಂದು ಸೈಕಲ್, ಹುಲ್ಲು ಕತ್ತರಿಸುವ ಯಂತ್ರ ಹಾಗೂ ೫೦ ತೆಂಗಿನ ಕಾಯಿಗಳನ್ನು ಕಳ್ಳರು ಕಳವು ನಡೆಸಿರುವುದಾಗಿ ದೂರಲಾಗಿದೆ. ಅಬ್ದುಲ್ ರಹಮಾನ್ ನಿನ್ನೆ ರಾತ್ರಿ ಮನೆಯ ಸಿಟೌಟ್ನಲ್ಲಿ ಮಲಗಿದ್ದರು. ಇಂದು ಬೆಳಿಗ್ಗೆ ಅವರು ಎಚ್ಚೆತ್ತಾಗಲೇ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಅಬ್ದುಲ್ ರಹಮಾನ್ ತಲೆದಿಂಬಿನಡಿ ಮೊಬೈಲ್ ಇರಿಸಿದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ ನೋಡಿದಾಗ ಮೊಬೈಲ್ ಫೋನ್ ನಾಪತ್ತೆಯಾಗಿದೆ. ಮೊಬೈಲ್ನಲ್ಲಿ ಬಳಸುತ್ತಿದ್ದ ಎರಡು ಸಿಮ್ಗಳನ್ನು ಕಳಚಿ ಅಲ್ಲಿಟ್ಟು ಕಳ್ಳರು ಮೊಬೈಲ್ ದೋಚಿದ್ದಾರೆ. ಕಳವು ನಡೆದ ಬಗ್ಗೆ ಅಬ್ದುಲ್ ರಹಮಾನ್ ಕುಂಬಳೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.