ಸಿ ಎ. ಮೊಹಮ್ಮದ್ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಸಜೆ, ಜುಲ್ಮಾನೆ
ಕಾಸರಗೋಡು: 2008 ಎಪ್ರಿಲ್ ತಿಂಗಳಲ್ಲಿ ಕಾಸರಗೋಡು ನಗರದಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ಪೈಕಿ 2008 ಎಪ್ರಿಲ್ 18ರಂದು ನಗರದ ಅಡ್ಕತ್ತಬೈಲು ಜಿ.ಟಿ. ರಸ್ತೆ ಬಳಿಯ ಬಿಲಾಲ್ ಮಸೀದಿ ಸಮೀಪದ ಸಿ.ಎ. ಮೊಹಮ್ಮದ್ (56)ರನ್ನು ಅಲ್ಲೆ ಪಕ್ಕ ಕೊಲೆಗೈದ ಪ್ರಕರಣದ ನಾಲ್ವರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶೆ ಕೆ. ಪ್ರಿಯ ಅವರು ಜೀವಾವಧಿ ಸಜೆ ಹಾಗೂ ತಲಾ 1 ಲಕ್ಷ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ತಲಾ ನಾಲ್ಕು ತಿಂಗಳು ಹೆಚ್ಚುವರಿ ಕಠಿಣ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಶಿಕ್ಷೆಗೊಳಗಾದ ನಾಲ್ವರನ್ನು ನಂತರ ಬಿಗಿ ಪೊಲೀಸ್ ಬಂದೋಭಸ್ತ್‌ನೊಂದಿಗೆ ಕಣ್ಣೂರು ಸೆಂಟ್ರಲ್ ಜೈಲಿಗೆ ಸಾಗಿಸಲಾಯಿತು.
ಈ ಕೊಲೆ ಪ್ರಕರಣದ ತೀರ್ಪು ನೀಡಿದ ದಿನವಾದ ನಿನ್ನೆ ನ್ಯಾಯಾಲಯ ಮತ್ತು ಪರಿಸರ ಪ್ರದೇಶಗಳಲ್ಲಿ ಭಾರೀ ಜನಸಮೂಹವೇ ನೆರೆದಿತ್ತು. ಅವರನ್ನೆಲ್ಲಾ ಪೊಲೀಸರು ಹೊರಗೆ ಕಳುಹಿಸಿ ಕೇಸಿಗೆ ಸಂಬAಧಪಟ್ಟವರನ್ನು ಮಾತ್ರವೇ ಒಳಪ್ರವೇಶಿಸಬಿಟ್ಟರು. ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯ ಮತ್ತು ಪರಿಸರ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಕಾವಲು ಏರ್ಪಡಿಸಲಾಗಿತ್ತು.
ಕೂಡ್ಲು ಗುಡ್ಡೆ ಟೆಂಪಲ್ ದೇವಸ್ಥಾನ ಬಳಿಯ ಸಂತೋಷ್ ನಾಯ್ಕ ಅಲಿಯಾಸ್ ಬಜೆ ಸಂತೋಷ್ (37), ತಾಳಿಪಡ್ಪು ನಿವಾಸಿ ಕೆ. ಶಿವ ಪ್ರಸಾದ್ ಅಲಿಯಾಸ್ ಶಿವ (41), ಕೂಡ್ಲು ಅಯ್ಯಪ್ಪ ನಗರದ ಕೆ. ಅಜಿತ್ ಕುಮಾರ್ ಅಲಿ ಯಾಸ್ ಅಜ್ಜು (36) ಮತ್ತು ಅಡ್ಕತ್ತಬೈಲು ಉಸ್ಮಾನ್ ಕ್ವಾರ್ಟರ್ಸ್ನ ಕೆ.ಜಿ. ಕಿಶೋರ್ (40) ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದು, ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಅಂದು ಕಾಸರಗೋಡು ಇನ್ಸ್ ಪೆಕ್ಟರ್ ಆಗಿದ್ದು, ಈಗ ಜಿಲ್ಲಾ ಹೆಚ್ಚುವರಿ ಎಸ್.ಪಿ ಆಗಿರುವ ಪಿ. ಬಾಲಕೃಷ್ಣನ್ ನಾಯರ್ರ ನೇತೃತ್ವದ ಪೊಲೀಸರ ತಂಡ ಈ ಕೊಲೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು. ಕೊಲೆಗೈಯ್ಯಲ್ಪಟ್ಟ ಮೊಹಮ್ಮದ್ರ ಎರಡನೇ ಮಗ ಈ ಕೊಲೆ ಪ್ರಕರಣದ ಪ್ರಧಾನ ಸಾಕ್ಷಿದಾರನಾಗಿದ್ದಾನೆ.