ಸುಳ್ಯದಲ್ಲಿ ವಿರಾಜ್ ಅಡೂರ್‌ಗೆಚಂದನ ಸಾಹಿತ್ಯರತ್ನ ಪ್ರಶಸ್ತಿ ಪ್ರದಾನ ನಾಳೆ

ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ನಾಳೆ ಬೆಳಗ್ಗೆ 10ರಿಂದ ಜರಗಲಿದೆ. ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಸಾಹಿತ್ಯ ಸಮಾರಂಭದಲ್ಲಿ ಕಾಸರಗೋಡು ಜಿಲ್ಲೆಯ ಸಾಹಿತಿ ವಿರಾಜ್ ಅಡೂರುರಿಗೆ ಈ ವರ್ಷದ ಚಂದನ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ತಿಳಿಸಿದ್ದಾರೆ.
ವಿರಾಜ್ ಅಡೂರು ಸಾಹಿತ್ಯ, ವ್ಯಂಗ್ಯಚಿತ್ರ ರಚನೆ, ಅಂಕಣ ಬರಹ, ಪತ್ರಿಕೋದ್ಯಮ, ಶಿಬಿರ ಸಂಘಟನೆ, ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ದ್ದಾರೆ. ಇವರ ಚುಟುಕುಟುಕು (ಚುಟುಕು ಸಂಕಲನ), ಬಾನುಲಿಯಿತು (ಆಕಾಶವಾಣಿ ಪ್ರಸಾರಿತ ಕವನಗಳ ಸಂಕಲನ), ನಗಿಸುವ ಚಿತ್ರಗಳು (ವ್ಯಂಗ್ಯಚಿತ್ರ ಸಂಕಲನ), ಗಾದೆ ಗಮ್ಮತ್ತು (ಅಂಕಣ ಬರಹ ಸಂಕಲನ), ಉಪನಯನ (ಧಾರ್ಮಿಕ ಸಂಕಲನ), ಶಿವಗಿರಿ (ಸಂಪಾದಿತ ಕೃತಿ), ಕಾಂತಾವರ ಕನ್ನಡ ಸಂಘದ, ‘ನಾಡಿಗೆ ನಮಸ್ಕಾರ’ ಪುಸ್ತಕ ಮಾಲಿಕೆಯಲ್ಲಿ, ಗಡಿನಾಡಿನ ಸಾಹಿತ್ಯ ಶ್ರೀನಿಧಿ- ವಿ.ಬಿ ಕುಳಮರ್ವ ಹಾಗೂ ಮಕ್ಕಳ ಸಾಹಿತ್ಯ ಸಂಗಮದ ಜಂಗಮ- ಬಿ. ಶ್ರೀನಿವಾಸ ರಾವ್ (ವ್ಯಕ್ತಿ ಪರಿಚಯ) ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಕೇರಳ ರಾಜ್ಯ ಮಟ್ಟದ ಮಾಧ್ವ ಬ್ರಾಹ್ಮಣ ಅತ್ಯುತ್ತಮ ಚಿತ್ರ ಕಲಾವಿದ ಪ್ರಶಸ್ತಿ, ಕಾಸರಗೋಡಿನ ಕನ್ನಡ ಭವನದ ಕನ್ನಡ ಪಯಸ್ವಿನಿ ಪ್ರಶಸ್ತಿ, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದಿAದ ಗಡಿನಾಡ ಚೈತನ್ಯ ಪ್ರಶಸ್ತಿ, ಕೋಟೆಗದ್ದೆ ಸೀತಾರಾಮ ಅಡಿಗ ಸ್ಮಾರಕ ಪಾಶುಪತ ಸಾಹಿತ್ಯ ಪ್ರಶಸ್ತಿ, ಕಾಸರಗೋಡಿನ ಪಾಂಗೋಡು ಶ್ರೀಕ್ಷೇತ್ರದಿಂದ ಕಾಸರಗೋಡು ದಸರಾ ಕವಿಶ್ರೇಷ್ಠ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ದೊರೆತಿವೆ. ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಆಶ್ರಯದಲ್ಲಿ ನಡೆದ ಭಗವದ್ಗೀತೆಯ ಕುರಿತಾದ ಕವನ ರಚನೆಯಲ್ಲಿ ವಿರಾಜ್ ಅಡೂರು ರಚಿಸಿದ ಸನಾತನದ ಸಾಗರ ಕವನಕ್ಕೆ ಮೊದಲ ಬಹುಮಾನದ ಜತೆಗೆ ಚೈತನ್ಯಶ್ರೀ ಪುರಸ್ಕಾರ ದೊರೆತಿದೆ. ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page