ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಮೃತ್ಯು
ಮಂಜೇಶ್ವರ: ಸ್ನೇಹಿತನ ಜೊತೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಂಭೀರ ಗಾಯಗೊಂಡ ಯುವಕ ಮೃತಪಟ್ಟ ಘಟನೆ ನಡೆದಿದೆ. ಉದ್ಯಾವರ ಗುತ್ತು ಅಂಬೇಡ್ಕರ್ ನಗರ ನಿವಾಸಿ ದಿ. ಸೋಮಯ್ಯರ ಪುತ್ರ ಕೂಲಿ ಕಾರ್ಮಿಕ ರಾಜೇಶ್ [40] ಮೃತಪಟ್ಟರು. ಶನಿವಾರ ರಾತ್ರಿ ಸುಮಾರು 10ಗಂಟೆಗೆ ಹೊಸಂಗಡಿ ಭಾಗದಿಂದ ಮನೆಗೆ ಸ್ನೇಹಿತನ ಸ್ಕೂಟರ್‌ನಲ್ಲಿ ಹಿಂಬದಿಯಲ್ಲಿ ಕುಳಿತು ಸಂಚರಿಸುತ್ತಿದ್ದಾಗ ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪ ಇಳಿಜಾರು, ತಿರುವು ರಸ್ತೆಯಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆನ್ನಲಾಗಿದೆ. ಈ ವೇಳೆ ರಾಜೇಶ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಮಂಗಳೂರಿಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬAಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸವಾರ ಪಾವೂರು ನಿವಾಸಿ ಉದಯ ಎಂಬವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ಶವ ಮಹಜರು ನಡೆಸಿ ನಿನ್ನೆ ಸಂಜೆ ಅಂತ್ಯಸAಸ್ಕಾರ ನಡೆಯಿತು. ಮೃತರು ತಾಯಿ ಸುಂದರಿ, ಪತ್ನಿ ಜಯಶ್ರೀ, ಮಕ್ಕಳಾದ ನಿರೀಶ, ನಿಖಿತ್, ಸಹೋದರರಾದ ವಿಜಯ್, ಪ್ರವೀಣ, ವಿನೋದ್, ರವಿ, ಸಂದೀಪ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.