ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡ ಯುವಕರ ಕೈಯಲ್ಲಿ ಎಂಡಿಎಂಎ ಪತ್ತೆ
ಕಾಸರಗೋಡು: ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡ ಯುವಕರಿಬ್ಬರ ಕೈವಶ ಎಂಡಿಎಂಎ ಮಾದಕವಸ್ತು ಪತ್ತೆಯಾಗಿದ್ದು, ಅದಕ್ಕೆ ಸಂಬಂಧಿಸಿ ಅವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಚೆಂಗಳ ನಾಲ್ಕನೇ ಮೈಲಿನ ರಹಮ್ಮತ್ ನಗರ ಮನಿಯಡ್ಕಂನ ನುಹ್ಮಾನ್ ಸಿ.ಝೆಡ್ (23) ಮತ್ತು ಎರ್ನಾಕುಳಂ ಕೋದಮಂಗಲಂ ತಡತ್ತಿ ಮಕ್ಕರ್ ನಿವಾಸಿ ಜೋಯಲ್ ಜೋಸೆಫ್ (23) ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಈ ಇಬ್ಬರು ನಿನ್ನೆ ಕೂಡ್ಲು ಚೌಕಿ ಎಂಬಲ್ಲಿ ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡಿದ್ದು ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಅವರ ನಡವಳಿಕೆಯಲ್ಲಿ ಶಂಕೆ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಅವರ ದೇಹ ತಪಾಸಣೆ ನಡೆಸಿದಾಗ ಓರ್ವನ ಕೈಯಲ್ಲಿ 1.18 ಗ್ರಾಂ ಎಂಡಿಎಂಎ ಹಾಗೂ ಮತ್ತೊಬ್ಬನ ಕೈಯಲ್ಲಿ 0.73 ಗ್ರಾಂ ಎಂಡಿಎಂಎ ಪತ್ತೆಯಾಗಿದೆಯೆಂದೂ ಅದನ್ನು ಅವರು ಮಾರಾಟ ಮಾಡಲೆಂದು ತಂದಿದ್ದರೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕೆ ಸಂಬಂ ಧಿಸಿ ಅವರಿಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.