ಸ್ಟೋಕ್ ಟ್ರೇಡಿಂಗ್ ಹೆಸರಲ್ಲಿ ಒಂದು ಕೋಟಿ ರೂ. ಲಪಟಾವಣೆ: ಆರೋಪಿ ಸೆರೆ
ಕಾಸರಗೋಡು: ಸ್ಟೋಕ್ ಟ್ರೇಡಿಂಗ್ ಹೆಸರಲ್ಲಿ ಒಂದು ಕೋಟಿ ರೂ. ಎಗರಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಸೌತ್‌ನ ಬೈತುಲ್ ಮೊಹಮ್ಮದ್ ವೀಟಿಲ್‌ನ ಮುಹಮ್ಮದ್ ಮುಜ್‌ತಭ (21) ಬಂಧಿತ ಆರೋಪಿ. ಮಲಪ್ಪುರಂ ಸೈಬರ್ ಪೊಲೀಸ್ ಠಾಣೆಯ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಕಂಡ ‘ಬ್ಲಾಕ್ ಹೋಕ್ ಏಂಜಲ್ ವನ್’ ಎಂಬ ಸ್ಟೋಕ್ ಇನ್‌ವೆಸ್ಟ್‌ಮೆಂಟ್‌ನ ಜಾಹೀರಾತು ಲಿಂಕ್ ಕ್ಲಿಕ್ ಮಾಡಿ ಅದರ ವಾಟ್ಸಪ್ ಗ್ರೂಪ್‌ಗೆ ನುಸುಳಿ ವೆಂಙಾರ ವಲಿಯೋರಾ ಪುತ್ತನಂಗಾಡಿ ನಿವಾಸಿಯೋರ್ವರ 1.8 ಕೋಟಿ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಆರೋಪಿಯನ್ನು ಬಂಧಿಸಲಾಗಿದೆ.
ತಾನು ಸ್ಟೋಕ್ ಟ್ರೇಡಿಂಗ್ ಕಂಪೆನಿಯ ಸಿಬ್ಬಂದಿಯಾಗಿರುವುದಾಗಿ ನಂಬಿಸಿ ಪತ್ತನಂಗಾಡಿ ನಿವಾಸಿಯ ಬ್ಯಾಂಕ್ ಖಾತೆಯಿಂದ ಆರೋಪಿ ಹಲವು ಬಾರಿಯಾಗಿ ಈ ರೀತಿ ಹಣ ಎಗರಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಮಲಪ್ಪುರಂ ವೆಂಙಾರ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದರು. ನಂತರ ಈ ಪ್ರಕರಣದ ಸೈಬರ್ ಸೆಲ್‌ಗೆ ಹಸ್ತಾಂತ ರಿಸಲಾಗಿತ್ತು. ಅದರಂತೆ ಸೈಬರ್ ಸೆಲ್ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಕಾಸರ ಗೋಡಿನಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಂಚನಾ ಜಾಲದಲ್ಲಿ ಇನ್ನೂ ಹಲವರು ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಅವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ.