ಸ್ಪಂದನ ಟ್ರಸ್ಟ್‌ನ ‘ಸ್ಪಂದನ 101ರ ಸ್ಪಂದನೆ’ ನಾಳೆ
ವರ್ಕಾಡಿ: ಸ್ಪಂದನ ಟ್ರಸ್ಟ್ ಕೋಳ್ಯೂರು 9ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ನಾಳೆ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಇದುವರೆಗೆ ಮಾಸಿಕ ಸೇವಾ ಯೋಜನೆಯಂತೆ 101 ತಿಂಗಳು ಸಹಾಯಧನ ಹಸ್ತಾಂತರಿಸಿದ್ದು, ಈ ಹಿನ್ನೆಲೆಯಲ್ಲಿ ‘ಸ್ಪಂದನ 101ರ ಸ್ಪಂದನೆ’ ಎಂಬ ಕಾರ್ಯಕ್ರಮದಂತೆ ಸಹಾಯಧನದ ಚೆಕ್ ಹಸ್ತಾಂತರ, ಯೋಧರಿಗೆ, ಸಮಾಜಸೇವಕರಿಗೆ, ಕೃಷಿಕರಿಗೆ ಗೌರವಾರ್ಪಣೆ ನಡೆಯಲಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಕೋಳ್ಯೂರು ಕ್ಷೇತ್ರದ ಅರ್ಚಕ ರವಿಶಂಕರ್ ಹೊಳ್ಳ ದೀಪ ಪ್ರಜ್ವಲನೆ ಗೈಯ್ಯುವರು. ಟ್ರಸ್ಟ್‌ನ ಟ್ರಸ್ಟಿ ಪ್ರಭಾಕರ ಮಜೀರ್ಪಳ್ಳ ಅಧ್ಯಕ್ಷತೆ ವಹಿಸುವರು. ಗಣೇಶ್ ಭಟ್ ವಾರಣಾಸಿ ಪ್ರಸ್ತಾಪಿಸುವರು. ಉಮೇಶ್ ಅಟ್ಟೆಗೋಳಿ, ಈಶ್ವರ ಭಟ್ ಕನ್ಯಾನ, ರಾಜ ಬೆಳ್ಚಪ್ಪಾಡ ಉದ್ಯಾವರ ಮಾಡ, ಭರತ್ ಕುಮಾರ್ ಉಳ್ಳಾಲ, ನೇಮಿರಾಜ್ ಶೆಟ್ಟಿ ಕಣಿಯೂರು, ಬಿ. ನರಸಿಂಗ ರಾವ್, ಡಾ. ಕಾವ್ಯಾ ಹೆಬ್ಬಾರ್, ಜಯಶ್ರೀ ನವೀನ್ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಐದು ಕುಟುಂಬಕ್ಕೆ ಸಹಾಯಧನದ ಚೆಕ್ ಹಸ್ತಾಂತರ, ಗೌರವಾರ್ಪಣೆ ನಡೆಯಲಿದೆ. ನಿವೃತ್ತ ಯೋಧ ಸುಳ್ಯಮೆ ನಿವಾಸಿ ದಿನಕರ ಕೋಟ್ಯಾನ್, ಸಮಾಜಸೇವಕ ತಿಲಕ್ ಸಾಲ್ಯಾನ್, ಸವಿತ ಕಾಂಚನ್ ಹೊಸಬೆಟ್ಟು, ಕೃಷಿಕ ರಾಮಚಂದ್ರ ಸಫಲ್ಯ ಕೋಳ್ಯೂರುರನ್ನು ಗೌರವಿಸಲಾಗುವುದು. ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಲಿದೆ.