ಹಗಲು ಕಳವು ನಡೆಸುತ್ತಿದ್ದ ಉಪ್ಪಳ ನಿವಾಸಿಯನ್ನು ಕರ್ನಾಟಕದ ಪ್ರತ್ಯೇಕ ತನಿಖಾ ತಂಡ ಸೆರೆ
ಉಪ್ಪಳ: ದಕ್ಷಿಣ ಕನ್ನಡದ ಪುತ್ತೂರು, ವಿಟ್ಲ, ಕಡಬ ತಾಲೂಕುಗಳಲ್ಲಿ ಹಲವಾರು ಸರಣಿ ಕಳ್ಳತನದಲ್ಲಿ ಬಾಗಿಯಾಗಿದ್ದ ಪ್ರಮುಖ ಆರೋಪಿ ಉಪ್ಪಳ ಗುಡ್ಡೆಮನೆ ನಿವಾಸಿ ಹಾಗೂ ಪ್ರಸ್ತುತ ಮೂಡಂಬೈಲು ನವಿಲುಗಿರಿ ಯಲ್ಲಿ ವಾಸಿಸುತ್ತಿರುವ ಸೂರಜ್ ಕೆ. (36)ನನ್ನು ಕರ್ನಾಟಕ ಪೊಲೀಸರ ತಂಡ ಬಂಧಿಸಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಉಪ್ಪಳಕ್ಕೆ ತಲುಪಿದ ಪೊಲೀಸರ ತಂಡ ಈತನನ್ನು ಸೆರೆ ಹಿಡಿದಿದೆ. ಕಳೆದ ಡಿಸೆಂಬರ್ ೨೦ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ಮನೆಯೊಂದರಿಂದ ಹಾಡಹಗಲೇ ಈತ ಕಳವು ನಡೆಸಿದ್ದ ನೆಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಹಿಂಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ಹಾಗೂ ಹಣವನ್ನು ಕಳವು ಮಾಡಿ ಯಾವುದೇ ಸೂಚನೆ ಲಭಿಸದಂತೆ ಪಾರಾಗಿದ್ದನು.
ವಿವಿಧ ಕಡೆಗಳಲ್ಲಿ ಹಗಲು ಹೊತ್ತಿನಲ್ಲೇ ಕಳ್ಳತನ ನಡೆಯುತ್ತಿರುವುದನ್ನು ಪತ್ತೆಹಚ್ಚಿದ ಪೊಲೀಸರು ಈತನ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದರು. ಹುಡುಕಾಟದ ಮಧ್ಯೆ ಜನವರಿ 10ರಂದು ಈತನ ಕಾರನ್ನು ಪೊಲೀಸರು ಪತ್ತೆಹಚ್ಚಿದ್ದರು. ಬಳಿಕದ ತನಿಖೆಯಿಂದ ಈತ ಸೆರೆಯಾಗಿದ್ದು, ವಿಟ್ಲ, ಪುತ್ತೂರು, ಕಡಬ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಈತನ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ಕೈಯಿಂದ ೧೮ ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಮಾರುತಿ ಕಾರು ತನಿಖಾ ತಂಡ ವಶಪಡಿಸಿದೆ.