ಹಟ್ಟಿ ಬೆಂಕಿಗಾಹುತಿ: ಹಸುಗಳು ಅಪಾಯದಿಂದ ಪಾರು
ವರ್ಕಾಡಿ: ಮೂರು ಹಸುಗಳನ್ನು ಕಟ್ಟಿಹಾಕಿದ್ದ ಹಟ್ಟಿಯೊಂದು ಬೆಂಕಿಗಾಹುತಿಯಾಗಿದೆ. ಘಟನೆ ಕೂಡಲೇ ಮನೆಯವರ ಗಮನಕ್ಕೆ ಬಂದಿದ್ದು, ಇದರಿಂದ ಹಸುಗಳನ್ನು ಅಪಾಯದಿಂದ ರಕ್ಷಿಸಲು ಸಾಧ್ಯವಾಯಿತು.
ಬಾಕ್ರಬೈಲುಮೂಲೆ ಎಂಬಲ್ಲಿನ ಮಹಾಬಲ ಶೆಟ್ಟಿಯವರ ಮನೆ ಬಳಿಯ ಹಟ್ಟಿ ಬೆಂಕಿಗಾಹುತಿ ಯಾಗಿದೆ. ಇಂದು ಮುಂಜಾನೆ ೨ ಗಂಟೆ ವೇಳೆ ಘಟನೆ ನಡೆದಿದೆ. ಹಟ್ಟಿಯಲ್ಲಿದ್ದ ಹಸುಗಳು ಕೂಗುತ್ತಿರುವುದು ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯವರು ಎಚ್ಚೆತ್ತು ನೋಡಿದಾಗ ಹಟ್ಟಿ ಉರಿಯುತ್ತಿರುವುದು ಕಂಡು ಬಂದಿದೆ. ಹಸುಗಳನ್ನು ಕೂಡಲೇ ಹೊರಕ್ಕೆ ತಂದು ಅವುಗಳನ್ನು ಅಪಾಯದಿಂದ ಪಾರು ಮಾಡಲಾಯಿತು. ಇದೇ ವೇಳೆ ಹಟ್ಟಿಯ ಅಟ್ಟದಲ್ಲಿದ್ದ ತೆಂಗಿನಕಾಯಿ ಹಾಗೂ ಬೈಹುಲ್ಲು ಉರಿದು ನಾಶಗೊಂಡಿದೆ. ಇದರಿಂದ ಸುಮಾರು ೨ ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಹಟ್ಟಿ ಬೆಂಕಿಗಾಹುತಿಯಾದ ವಿಷಯ ತಿಳಿದು ನಾಗರಿಕರು ತಲುಪಿ ನಂದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳವೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ಅಷ್ಟರೊಳಗಾಗಿ ಹಟ್ಟಿ ಪೂರ್ಣವಾಗಿ ಉರಿದಿದೆ. ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗಲಿದೆ ಎಂದು ಶಂಕಿಸಲಾಗಿದೆ.