ಹಣ ಹಿಂತಿರುಗಿಸದ ದ್ವೇಷ: ಆಸಿಡ್ ಎರಚಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಆರೋಪಿಗೆ 10 ವರ್ಷ ಕಠಿಣ ಸಜೆ, ಜುಲ್ಮಾನೆ
ಕಾಸರಗೋಡು: ಹಣ ಹಿಂತಿರುಗಿ ನೀಡದ ದ್ವೇಷದಿಂದ ಯುವಕನನ್ನು ಆಸಿಡ್ ಎರಚಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ 10 ವರ್ಷ ಕಠಿಣ ಸಜೆ ಹಾಗೂ 50,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಪಾಲ್ಘಾಟ್ ಕಿಳಕಾಂಚೇರಿ ಕುರುಂತ್ತೋಟಿಕ್ಕಲ್ ವೀಟಿಲ್‌ನ ಬಿ.ಎಂ. ಜೋನ್ (63) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಬೇಡಡ್ಕ ಸಮೀಪದ ಬೀಟಿಕ್ಕಲ್‌ನ ಅರವಿಂದಾಕ್ಷನ್ ಎಂಬವರ ಮೇಲೆ ಆಸಿಡ್ ಎರಚಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗೆ ಈ ಶಿಕ್ಷೆ ವಿಧಿಸಿದೆ.
ಆರೋಪಿ ಜೋನ್‌ಗೆ ಅರವಿಂದಾಕ್ಷನ್ 150 ರೂ. ನೀಡಲು ಬಾಕಿ ಇತ್ತು. ಆ ದ್ವೇಷದಿಂದ 2021 ನವೆಂಬರ್ 17ರಂದು ಆರೋಪಿ ಜೋನ್ ಅರವಿಂದಾಕ್ಷನ್‌ರ ಕೃಷಿ ತೋಟಕ್ಕೆ ಬಂದು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದೆಸೆದಿದ್ದನೆಂದೂ, ಅದನ್ನು ಅರವಿಂದಾಕ್ಷನ್ ಪ್ರಶ್ನಿಸಿದಾಗ ಅವರ ಮೇಲೆ ಆರೋಪಿ ರಬ್ಬರ್ ಹಾಲಿಗೆ ಬೆರೆಸುವ ಆಸಿಡ್ ಎರಚಿ ಕೊಲೆಗೈಯ್ಯಲೆತ್ನಿಸಿದ ದೂರಿನಂತೆ ಬೇಡಗ ಪೊಲೀಸರು ಜೋನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಬೇಡಗಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಟಿ. ಉತ್ತಮ್‌ದಾಸ್ ಆರೋಪಿಯನ್ನು ಬಂಧಿಸಿದ್ದರು. ಆ ಬಳಿಕ ಇನ್ಸ್‌ಪೆಕ್ಟರ್ ಕೆ. ದಾಮೋದರನ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗೆ ಈ ಶಿಕ್ಷೆ ವಿಧಿಸಿದೆ. ಪ್ರೋಸಿಕ್ಯೂಷನ್ ಪರವಾಗಿ ಹೆಚ್ಚುವರಿ ಜಿಲ್ಲಾ ಪಬ್ಲಿಕ್ ಪ್ರೋಸಿಕ್ಯೂಟರ್ ಸತೀಶನ್ ನ್ಯಾಯಾಲಯದಲ್ಲಿ ವಾದಿಸಿದ್ದರು.