ಹನಿಟ್ರಾಪ್: ಯುವಕನ ಹಣ, ಚಿನ್ನ ಎಗರಿಸಿದ ಪ್ರಕರಣ; ಯುವತಿ ಸೆರೆ
ಕಾಸರಗೋಡು: ಇನ್ಸ್ಟಾಗ್ರಾಂನಲ್ಲಿ ಪರಿಚಯಗೊಂಡು ಹನಿಟ್ರಾಪ್ನಲ್ಲಿ ಸಿಲುಕಿಸಿ ಯುವಕನಿಂದ ಚಿನ್ನ ಮತ್ತು ಹಣ ಎಗರಿಸಿದ ಪ್ರಕರಣದ ಆರೋಪಿಯಾಗಿದ್ದು, ಬಳಿಕ ತಲೆಮರೆಸಿಕೊಂಡಿದ್ದ ಯುವತಿಯನ್ನು ಮೇಲ್ಪರಂಬ ಪೊಲೀಸರು ಉಡುಪಿಯಿಂದ ಬಂಧಿಸಿದ್ದಾರೆ.
ಚೆಮ್ನಾಡು ಕೊಂಬನಡ್ಕ ಶ್ರುತಿ ಚಂದ್ರಶೇಖರನ್ (35) ಬಂಧಿತಳಾದ ಯುವತಿ. ಈಕೆ ಉಡುಪಿಯಲ್ಲಿ ತಲೆ ಮರೆಸಿಕೊಂಡು ಜೀವಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ಮೇಲ್ಪರಂಬ ಪೊಲೀಸ್ ಠಾಣೆಯ ಎಸ್ಐ ಎ.ಎಸ್. ಸುರೇಶ್ ಕುಮಾರ್ರ ನೇತೃತ್ವದ ಪೊಲೀಸರು ಅಲ್ಲಿಗೆ ಸಾಗಿ ಆಕೆಯನ್ನು ಅಲ್ಲಿನ ವಸತಿಗೃಹವೊಂದರಿಂದ ಬಂಧಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪರಿಚ ಯಗೊಂಡ ಪೊಯಿನಾಚಿಯ ೩೦ ವರ್ಷದ ಯುವಕನೋರ್ವನನ್ನು ಪರಿಚಯಗೊಂಡು, ನಂತರ ಆತನನ್ನು ಹನಿಟ್ರಾಪ್ನಲ್ಲಿ ಸಿಲುಕಿಸಿ ಆತನಿಂದ ಒಂದು ಲಕ್ಷ ರೂ. ಹಾಗೂ ಒಂದು ಪವನ್ ಚಿನ್ನದ ಸರ ಎಗರಿಸಿದ ಬಗ್ಗೆ ಆತ ದೂರು ನೀಡಿದ್ದನು. ಅದರಂತೆ ಶ್ರುತಿ ಚಂದ್ರಶೇಖರನ್ಳ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನಿಂದ ಆಕೆ ತಲೆಮರೆಸಿಕೊಂಡಿದ್ದಳು.
ತಾನು ಐಎಸ್ಆರ್ಒ ಅಧಿಕಾರಿಯಾಗಿರುವುದಾಗಿ ನಂಬಿಸಿ ಅದರ ಸೋಗಿನಲ್ಲಿ ಆಕೆ ಪೊಯಿನಾಚಿಯ ಯುವಕನನ್ನು ಇನ್ಸ್ಟಾಗ್ರಾಂನಲ್ಲಿ ಪರಿಚಯಗೊಂಡು ಆತನನ್ನು ತನ್ನ ಬಲೆಗೆ ಬೀಳಿಸಿದ್ದಳೆಂದು ಆರೋಪಿಸಲಾಗಿದೆ. ತನ್ನಿಂದ ಪಡೆದ ಹಣ ಮತ್ತು ಚಿನ್ನವನ್ನು ತನಗೆ ಹಿಂತಿರುಗಿಸುವಂತೆ ಆ ಯುವಕ ಕೇಳಿದಾಗ, ತಾನು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ನಿಕಟ ನಂಟು ಹೊಂದಿದವಳಾಗಿದ್ದೇನೆ, ಅದರ ಪ್ರಭಾವ ಬೀರಿ ನಿನ್ನನ್ನೇ ಕೇಸಿನಲ್ಲಿ ಸಿಲುಕಿಸುವುದಾಗಿ ಆಕೆ ಬೆದರಿಸಿದ ಳೆಂದೂ ಆರೋಪಿಸಲಾಗಿದೆ. ಆ ಬಳಿಕವಷ್ಟೇ ಯುವಕ ಈ ವಂಚನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದನು.
ನಕಲಿ ಗುರುತು ಪತ್ರ ತಯಾರಿಸಿದ ಬಗ್ಗೆಯೂ ಈ ಯುವತಿ ವಿರುದ್ಧ ಕೇಸು ದಾಖಲಿಸಿಕೊಂಡಿದೆ. ಈಕೆಯ ವಿರುದ್ಧ ಕಾಸರಗೋಡು, ಅಂಬಲತರ, ಕಣ್ಣೂರು ಮತ್ತು ಕೊಯಿಲಾಂಡಿ ಪೊಲೀಸ್ ಠಾಣೆಗಳಿಗೂ ಹಲವು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.