ಹನುಮಾನ್‌ನಗರದ ರಸ್ತೆ ನೀರುಪಾಲು: ಸಂಪರ್ಕ ಕಡಿತದಿಂದ ಮೀನುಗಾರರ ಬದುಕು ಸಂಕಷ್ಟ
ಉಪ್ಪಳ: ನಿನ್ನೆ ಸಂಜೆವರೆಗೆ ಹೀಗಿದ್ದ (ಚಿತ್ರ-1) ರಸ್ತೆ ಈಗ ಹೀಗಿದೆ (ಚಿತ್ರ-2). ಹನುಮಾನ್‌ನ ಗರದ ಕಾಂಕ್ರೀಟ್ ರಸ್ತೆಯ ದುಸ್ಥಿತಿ ಈ ಚಿತ್ರದಲ್ಲಿರುವುದು. ರಸ್ತೆಯನ್ನು ಸಮುದ್ರ ನುಂಗಲು ಸಿದ್ಧವಾಗುತ್ತಿದೆಯೆಂದು ನಿನ್ನೆಯ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಆದರೆ ಸಂಜೆ ವೇಳೆಗೆ ಕಡಲ್ಕೊರೆ ತದಿಂದ ರಸ್ತೆಯ ಅಡಿಭಾಗದ ಮಣ್ಣು ನೀರುಪಾಲಾಗಿದ್ದು ಕಾಂಕ್ರೀಟ್ ರಸ್ತೆ ಕುಸಿದಿದೆ.
ರಸ್ತೆ ಕುಸಿತದ ಜೊತೆಗೆ ಈ ಭಾಗದ ಹಲವು ಮನೆಗಳು ಕೂಡಾ ನೀರು ಪಾಲಾಗುವ ಭೀತಿ ಎದುರಿಸುತ್ತಿದೆ. ಈ ರಸ್ತೆಯನ್ನು ಕಳೆದ ವರ್ಷ ಭಾರೀ ಮೊತ್ತ ವೆಚ್ಚಮಾಡಿ ನಿರ್ಮಿಸಲಾಗಿದ್ದು, ಅದೀಗ ನೀರ ಮೇಲಿನ ಹೋಮದಂತಾಗಿದೆ.
ರಸ್ತೆ ಕುಸಿದು ಸಂಪರ್ಕ ಕಡಿದುಹೋದ ಕಾರಣ ಈ ಪ್ರದೇಶದ ಮೀನುಗಾರರು, ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಈ ರಸ್ತೆಯ ರಕ್ಷಣೆಗಾಗಿ ನಿರ್ಮಿಸಿದ ತಡೆಗೋಡೆ ಕಳೆದ ಹಲವು ದಿನಗಳಿಂದ ನೀರುಪಾಲಾಗುತ್ತಾ ಬರುತ್ತಿತ್ತು. ನಿನ್ನೆ ಸಂಜೆ ರಸ್ತೆಯೇ ಹಾನಿಯಾಯಿತು. ಈ ಪ್ರದೇಶದಲ್ಲಿ ಸುಮಾರು 500 ಮೀನುಗಾರರ ಕುಟುಂಬಗಳಿದ್ದು, ಇವರಿಗೆ ಈಗ ವಾಹನ ಸಂಚಾರಕ್ಕೆ ರಸ್ತೆ ಇಲ್ಲದಾಗಿದೆ. ಮುಸೋಡಿ, ಮಣಿಮುಂಡ, ಶಿವಾಜಿನಗರ, ಐಲ ಬಂಗ್ಲ ಮೊದಲಾದ ಪ್ರದೇಶಗಳಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ. ಹನುಮಾನ್‌ನಗರದ ರಸ್ತೆ ನೀರುಪಾಲಾಗಲು ಕಾರಣ ತಡೆಗೋಡೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸುತ್ತಾರೆ.