ಹಲವು ವರ್ಷಗಳ ಹಿಂದಿನ ಮನೆಯ ಛಾವಣಿ ಕುಸಿತ: ಕುಟುಂಬ ಆತಂಕದಲ್ಲಿ
ಬದಿಯಡ್ಕ: ಹಲವು ವರ್ಷಗಳ ಹಿಂದೆ ನಿರ್ಮಿಸಿದ ಹೆಂಚಿನ ಮನೆಯ ಮೇಲ್ಛಾವಣಿ ಆಂಶಿಕವಾಗಿ ಕುಸಿದು ಬಿದ್ದಿದ್ದು, ಇದರಿಂದ ಪರಿಶಿಷ್ಟ ಜಾತಿ ಕುಟುಂಬವೊಂದು ಸಮಸ್ಯೆಗೀಡಾಗಿದೆ.
ಬದಿಯಡ್ಕ ಪಂಚಾಯತ್ ವ್ಯಾಪ್ತಿಯ ಕಂಗಿಲ ಎಂಬಲ್ಲಿ ಬಟ್ಟು ಎಂಬವರ ಮನೆ ಮೊನ್ನೆ ಮಧ್ಯಾಹ್ನ ಬೀಸಿದ ಗಾಳಿಗೆ ಸಿಲುಕಿ ಛಾವಣೆ ಕುಸಿದೆ. ಮನೆಯ ಪಕ್ಕಾಸುಗಳು ಮುರಿಯುವ ಶಬ್ದ ಕೇಳಿದ್ದು, ತಕ್ಷಣ ಬಟ್ಟುರ ಪತ್ನಿ ಭಾಗಿ ಹಾಗೂ ಮಗಳು ಹೊರಗೆ ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ೨೦ ವರ್ಷಗಳ ಹಿಂದೆ ಪರಿಶಿಷ್ಟ ಜಾತಿ ಇಲಾಖೆ ಮೂಲಕ ಮುಂಜೂರಾದ ಮನೆ ಇದಾಗಿದೆ. ಅನಂತರ ಇದರ ದುರಸ್ತಿಗೆ ಸಹಾಯ ಲಭಿಸಿಲ್ಲವೆನ್ನಲಾಗಿದೆ. ಮನೆಯೊಳಗೆ ನೀರು ಸೋರಿಕೆಯಾಗುತ್ತಿದ್ದುರಿಂದ ಪ್ಲಾಸ್ಟಿಕ್ ಹೊದಿಸಿ ತಾತ್ಕಾಲಿಕ ಪರಿಹಾರ ಕಾಣಲಾಗಿತ್ತು. ಸರಕಾರದ ಲೈಫ್ ಮಿಷನ್ ವಸತಿ ಯೋಜನೆ ಮೂಲಕ ಹೊಸ ಮನೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಗೋಡೆ ಗಟ್ಟಿಯಿದೆಯೆಂದು ತಿಳಿಸಿ ಆದ್ಯತಾ ಪಟ್ಟಿಯಲ್ಲಿ ಬಟ್ಟುರ ಹೆಸರು ಸೇರ್ಪಡೆಗೊಳಿಸಿಲ್ಲವೆಂದು ಹೇಳಲಾಗುತ್ತಿದೆ.
ಮೊನ್ನೆ ಮಧ್ಯಾಹ್ನ ಮನೆಯ ಛಾವಣಿ ಕುಸಿದು ಬಿದ್ದು ಕುಟುಂಬ ಸಂಕಷ್ಟಕ್ಕೊಳಗಾದ ವಿಷಯ ತಿಳಿದು ವಾರ್ಡ್ ಸದಸ್ಯೆ ಜ್ಯೋತಿ ಕಾರ್ಯಾಡು ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ಲ ಉಕ್ಕಿನಡ್ಕ, ಕರೀಂ ಕೆದುಮೂಲೆ ಎಂಬಿವರು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದರು. ಈ ಕುಟುಂಬಕ್ಕೆ ಮನೆ ಲಭಿಸಲು ಬೇಕಾದ ಕ್ರಮ ಕೈಗೊಳ್ಳಲಾಗುವುದೆಂದು ಸದಸ್ಯೆ ಜ್ಯೋತಿ ಕಾರ್ಯಾಡು ತಿಳಿಸಿದ್ದಾರೆ.