ಹಾಡಹಗಲು ಕಾರಿನಲ್ಲಿ ತಲುಪಿದ ತಂಡದಿಂದ ಯುವಕನ ಅಪಹರಣ
ಕಾಸರಗೋಡು: ಗೆಳೆಯನೊಂದಿಗೆ ಮಾತನಾಡುತ್ತಿದ್ದ ಮಧ್ಯೆ ಯುವಕನನ್ನು ಕಾರಿನಲ್ಲಿ ತಲುಪಿದ ತಂಡ ಅಪಹರಿಸಿದೆ. ಚಟ್ಟಂಚಾಲ್ ಕುನ್ನಾರ ನಿವಾಸಿ ಕೆ. ಹರ್ಷಾದ್ (27)ನನ್ನು ಅಪಹರಿಸಲಾಗಿದೆ. ಪ್ರಕರಣದಲ್ಲಿ ಚೆಂಗಳ, ಸಿಟಿಸನ್ ನಗರದ ತಮ್ಮು ಹಾಗೂ ಕಂಡರೆ ಗುರುತು ಪತ್ತೆಹಚ್ಚಬಹುದಾದ ಮೂರು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ಯುವಕನ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು, ಪುನ್ನಾರದ ಜಿಲಾನಿ ಸೂಪರ್ ಮಾರ್ಕೆಟ್ ಸಮೀಪದಲ್ಲಿರುವ ಹೊಟೇಲ್‌ನಲ್ಲಿ ಗೆಳೆಯನೊಂದಿಗೆ ಹರ್ಷಾದ್ ಮಾತನಾಡುತ್ತಾ ನಿಂತಿದ್ದರು. ಈ ಮಧ್ಯೆ ಸ್ವಿಫ್ಟ್ ಕಾರಿನಲ್ಲಿ ತಲುಪಿದ ತಂಡ ಅವರನ್ನು ಅಪಹರಿಸಿಕೊಂಡು ಹೋಗಿದೆ ಎಂದು ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಕೇಸಿನಲ್ಲಿ ತಿಳಿಸಲಾಗಿದೆ. ಆರ್ಥಿಕ ವ್ಯವಹಾರ ಸಂಬಂಧ ಅಪಹರಣ ನಡೆದಿದೆ ಎಂದು ಶಂಕಿಸಲಾಗಿದೆ.